×
Ad

ಉಡುಪಿಯಲ್ಲಿ ಆ.2ರಂದು ‘ಮತ್ತೆ ಕಲ್ಯಾಣ’ ಕಾರ್ಯಕ್ರಮ

Update: 2019-07-28 17:12 IST

ಉಡುಪಿ, ಜು. 28: ಚಿತ್ರದುರ್ಗ ಜಿಲ್ಲೆಯ ಸಾಣೆಹಳ್ಳಿಯ ಶ್ರೀತರಳಬಾಳು ಜಗದ್ಗುರು ಶಾಖಾ ಮಠದ ಸಹಮತ ವೇದಿಕೆಯ ವತಿಯಿಂದ ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿರುವ ಮತ್ತೆ ಕಲ್ಯಾಣ ಕಾರ್ಯಕ್ರಮವು ಉಡುಪಿ ಬಸವ ಸಮಿತಿಯ ಸಹಯೋಗದೊಂದಿಗೆ ಆ.2ರಂದು ಉಡುಪಿಯ ಪುರಭವನದಲ್ಲಿ ನಡೆಯಲಿದೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಉಡುಪಿ ಜಿಲ್ಲಾ ಮತ್ತೆ ಕಲ್ಯಾಣ ಸ್ವಾಗತ ಸಮಿತಿಯ ಅಧ್ಯಕ್ಷ ಯು.ಸಿ.ನಿರಂಜನ್ ಈ ಕುರಿತು ಮಾಹಿತಿ ನೀಡಿದರು. ಬೆಳಗ್ಗೆ 11ಗಂಟೆಗೆ ಸಾಣೆಹಳ್ಳಿ ಮಠದ ಶ್ರೀಪಂಡಿತಾರಾಧ್ಯ ಶಿವಾ ಚಾರ್ಯ ಸ್ವಾಮೀಜಿ ‘ವಚನ ಸಾಹಿತ್ಯ’ ಎಂಬ ವಿಷಯದ ಕುರಿತು ಜಿಲ್ಲೆಯ ಆಯ್ದ ಕಾಲೇಜುಗಳ 500 ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಲಿರುವರು.

 ಈ ಸಂವಾದದಲ್ಲಿ ಕಾಂತಾವರ ಅಲ್ಲಮಪ್ರಭು ಪೀಠದ ನಿರ್ದೇಶಕ ಡಾ.ನಾ. ಮೊಗಸಾಲೆ, ಉಡುಪಿ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರಾಧ್ಯಪಕ ನಾಗರಾಜ ಜೆ.ಎಂ. ಭಾಗವಹಿಸಲಿರುವರು. ಸಮಾಜದಲ್ಲಿರುವ ಅಸಹಿಷ್ಣುತೆಯಿಂದ ಹೊರಗಡೆ ಬರುವ ದಾರಿಯನ್ನು ಚಿಂತನೆ ಹಾಗೂ ಪ್ರಶ್ನೆ ಗಳ ಮೂಲಕ ಕಂಡುಕೊಳ್ಳುವ ಪ್ರಯತ್ನವೇ ಈ ಸಂವಾದದ ಉದ್ದೇಶವಾಗಿದೆ ಎಂದು ಅವರು ತಿಳಿಸಿದರು.

ಸಾರ್ವಜನಿಕ ಸಮಾವೇಶ: ಸಂಜೆ 5 ಗಂಟೆಗೆ ನಡೆಯುವ ಸಾರ್ವಜನಿಕ ಸಮಾವೇಶದಲ್ಲಿ ಸಾಣೆಹಳ್ಳಿ ಸ್ವಾಮೀಜಿ ಉಡುಪಿ ಬಸವ ಸಮಿತಿಯನ್ನು ಉದ್ಘಾಟಿಸಲಿರುವರು. ಮಾಜಿ ಶಾಸಕ ಹಾಗೂ ಚಿಂತಕ ವೈ.ಎಸ್.ವಿ.ದತ್ತ ‘ಬಸವಣ್ಣ ಮತ್ತು ಜನತಂತ್ರ’ ಹಾಗೂ ಗುಲ್ಬರ್ಗಾದ ಚಿಂತಕಿ ಕೆ.ನೀಲಾ ‘ವಚನ ಗಳ ಸಮಾನತೆಯ ಆಶಯ’ ವಿಷದ ಕುರಿತು ಉಪನ್ಯಾಸ ನೀಡಲಿರುವರು.

ಅಧ್ಯಕ್ಷತೆಯನ್ನು ಕನಕದಾಸ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ಮೇಟಿ ಮುದಿಯಪ್ಪ ವಹಿಸಲಿರುವರು. ಕೋಟ ಶ್ರೀನಿವಾಸ ಪೂಜಾರಿ, ಕೆ.ರಘುಪತಿ ಭಟ್, ಲಾಲಾಜಿ ಆರ್.ಮೆಂಡನ್, ವಿನಯ ಕುಮಾರ್ ಸೊರಕೆ, ಪ್ರಮೋದ್ ಮಧ್ವರಾಜ್ ಭಾಗವಹಿಸಲಿರುವರು.

ರಾತ್ರಿ 7ಗಂಟೆಗೆ ಸಾಣೆಹಳ್ಳಿ ಶಿವಸಂಚಾರ ತಂಡದಿಂದ ಪಂಡಿತಾರಾಧ್ಯ ಶಿವಾರ್ಚಾಯ ಸ್ವಾಮೀಜಿ ರಚನೆಯ ಹಾಗೂ ಜಗದೀಶ್ ಆರ್. ನಿರ್ದೇಶನದ ‘ಮೋಳಿಗೆ ಮಾರಯ್ಯ’ ನಾಟಕ ಪ್ರದರ್ಶನಗೊಳ್ಳಲಿದೆ. ರಾತ್ರಿ 8.30ಕ್ಕೆ ಸಾಮೂಹಿಕ ದಾಸೋಹ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಹಿರಿಯ ಚಿಂತಕ ಜಿ.ರಾಜಶೇಖರ್, ದಸಂಸ ಹಿರಿಯ ಮುಖಂಡರಾದ ಸುಂದರ್ ಮಾಸ್ತರ್, ಶ್ಯಾಮ್‌ರಾಜ್ ಬಿರ್ತಿ, ಉಡುಪಿ ಬಸವ ಸಮಿತಿಯ ಗೌರವಾಧ್ಯಕ್ಷ ಡಾ.ಜಿ.ಎಸ್.ಚಂದ್ರಶೇಖರ್, ಅಧ್ಯಕ್ಷ ಜಿ.ಎಂ.ಪಾಟೀಲ, ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಬ್ದುಲ್ ಅಝೀಝ್ ಉದ್ಯಾವರ, ಪ್ರೊ.ಸಿರಿಲ್ ಮಥಾಯಸ್ ಮೊದಲಾದವರು ಉಪಸ್ಥಿತರಿದ್ದರು.

ಸರ್ಧರ್ಮೀಯರಿಂದ ಸಾಮರಸ್ಯ ನಡಿಗೆ

ಮತ್ತೆ ಕಲ್ಯಾಣ ಕಾರ್ಯಕ್ರಮದ ಪ್ರಯುಕ್ತ ಮಧ್ಯಾಹ್ನ 3.30ಕ್ಕೆ ಉಡುಪಿ ಬೋರ್ಡ್ ಹೈಸ್ಕೂಲ್ ನಿಂದ ಅಜ್ಜರಕಾಡುವಿನ ಪುರಭವನದವರೆಗೆ ಸಾುರಸ್ಯ ನಡಿಗೆ ಹಮ್ಮಿಕೊಳ್ಳಲಾಗಿದೆ.

ನಾವೆಲ್ಲರು ಒಂದೇ ಎಂಬ ಸಂದೇಶ ಸಾರುವ ನಿಟ್ಟಿನಲ್ಲಿ ವಿವಿಧ ಧಾರ್ಮಿಕ ನೇತಾರರು, ಜನಪ್ರತಿನಿಧಿಗಳು ಮತ್ತು ಸರ್ವಧರ್ಮ, ಜಾತಿಗಳ ಜನರೊಂದಿಗೆ ಸೇರಿ ಈ ನಡಿಗೆಯನ್ನು ಆಯೋಜಿಸಲಾಗಿದೆ ಎಂದು ಯು.ಸಿ.ನಿರಂಜನ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News