ದೂರುಗಳಿಗೆ ಸ್ಪಂದಿಸಲು ಠಾಣಾಧಿಕಾರಿಗೆ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಸ್ಪಷ್ಟ ಸೂಚನೆ

Update: 2019-07-28 11:53 GMT

ಮಂಗಳೂರು, ಜು.28: ದಲಿತರ ಸಹಿತ ಯಾರೇ ಆದರೂ ದೂರುಗಳನ್ನು ಹಿಡಿದುಕೊಂಡು ಪೊಲೀಸ್ ಠಾಣೆಗೆ ತೆರಳಿದಾಗ ತಕ್ಷಣ ಸ್ಪಂದಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಎಲ್ಲ ಠಾಣಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಹೇಳಿದ್ದಾರೆ.

ಮಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ರವಿವಾರ ನಡೆದ ಎಸ್ಸಿ-ಎಸ್ಟಿ ಮಾಸಿಕ ಸಭೆಯಲ್ಲಿ ಅಹವಾಲು ಸ್ವೀಕರಿಸಿ ಅವರು ಮಾತನಾಡಿದರು.

ಕಾನೂನು ಬಾಹಿರ ಚಟುವಟಿಕೆಗಳು ಎಲ್ಲೇ ಕಂಡು ಬಂದರೂ ಕೂಡ ತಕ್ಷಣ ಕಂಟ್ರೋಲ್ ರೂಮ್‌ಗೆ ತಿಳಿಸಿದರೆ ಕಾರ್ಯಾಚರಣೆ ನಡೆಸಲಾಗು ವುದು. ಯಾವುದೇ ಸಮಸ್ಯೆಗಳಿದ್ದರೆ ದಲಿತ ಕುಂದು ಕೊರತೆ ಸಭೆಯ ತನಕ ಕಾಯುವ ಅಗತ್ಯವಿಲ್ಲ. ಯಾವುದೇ ಸಮಯದಲ್ಲಿ ಭೇಟಿಯಾಗಿ ಅಹವಾಲು ಸಲ್ಲಿಸಬಹುದು ಎಂದು ಸಂದೀಪ್ ಪಾಟೀಲ್ ಸ್ಪಷ್ಟಪಡಿಸಿದರು.

ತಲಪಾಡಿ ಗ್ರಾಮ ಸಭೆಯಲ್ಲಿ ದಯಾನಂದ ಪಿಲಿಕೂರು ಎಂಬವರು ರಾಜಕೀಯ ವ್ಯಕ್ತಿಗಳನ್ನು ವಿಡಂಬನೆ ಮಾಡುತ್ತಾ ಅಂಬೇಡ್ಕರ್ ಅವರ ಬಗ್ಗೆ ವ್ಯಂಗ್ಯವಾಗಿ ಮಾತನಾಡಿದ್ದಾರೆ. ಅವರ ವಿರುದ್ಧ ಉಳ್ಳಾಲ ಠಾಣೆಗೆ ದೂರು ನೀಡಲಾಗಿದೆ. ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸುಧಾಕರ್ ದೂರಿದರು. ಈ ಬಗ್ಗೆ ಪರಿಶೀಲಿಸಲಾಗುವುದು ಎಂದು ಆಯುಕ್ತರು ಭರವಸೆ ನೀಡಿದರು.

ಕೆ.ಸಿ.ರೋಡ್‌ನಲ್ಲಿ ನಿರ್ಮಿಸಲಾಗು ಸಮುದಾಯ ಭವನಕ್ಕೆ 10ಲಕ್ಷ ರೂ. ಅನುದಾನ ಬಂದಿದೆ. ಆದರೆ ಇದೀಗ ಕಾಮಗಾರಿ ಸ್ಥಗಿತಗೊಂಡಿದೆ ಎಂದು ಸುಧಾಕರ್ ಆರೋಪಿಸಿದರು.

ದಲಿತ ಮುಖಂಡ ಜಗದೀಶ್ ಪಾಂಡೇಶ್ವರ ಮಾತನಾಡಿ, ಸುರತ್ಕಲ್‌ನಲ್ಲಿ ಅಂಬೇಡ್ಕರ್ ಭವನ ಪೂರ್ಣಗೊಂಡಿಲ್ಲ. ಶೌಚಗೃಹ, ವಿದ್ಯುತ್ ಕಲ್ಪಿಸಿಲ್ಲ ಎಂದು ದೂರಿದರು.

ತನ್ನ ಪುತ್ರ ಅಪಘಾತಕ್ಕೀಡಾಗಿ ಎರಡು ವರ್ಷ ಕಳೆದಿದೆ. ಇನ್ನೂ ಪರಿಹಾರ ಸಿಕ್ಕಿಲ್ಲ ಎಂದು ಕುಂಜತ್ತಬೈಲ್‌ನ ಜ್ಯೋತಿ ಎಂಬವರು ಅಹವಾಲು ತೋಡಿಕೊಂಡರು. ಈ ಬಗ್ಗೆ ಪರಿಶೀಲಿಸಿ ಕ್ರಮ ಜರುಗಿಸುವಂತೆ ಸಂಚಾರ ವಿಭಾಗದ ಎಸಿಪಿಗೆ ಆಯುಕ್ತರು ಸೂಚಿಸಿದರು.

ಜಲ್ಲಿಗುಡ್ಡೆಯ ಕಾಲನಿಯಲ್ಲಿ ಕೋಳಿ ಅಂಕ ನಡೆಯುತ್ತಿದೆ. ಅದನ್ನು ಮಟ್ಟ ಹಾಕುವಂತೆ ಜ್ಯೋತಿ ಒತ್ತಾಯಿಸಿದರು. ವಾಮಂಜೂರು, ಬಜ್ಪೆ, ಕೆತ್ತಿಕಲ್ ಮೊದಲಾದ ಕಡೆಯೂ ಕೋಳಿ ಅಂಕ ಎಗ್ಗಿಲ್ಲದೆ ನಡೆಯುತ್ತಿದೆ ಎಂದು ಮುಖೇಶ್ ದೂರಿದರು.

ಪ್ರದೀಪ್ ಎಂಬವರು ಕೆಲಸ ಮಾಡಿಸಿಕೊಂಡು ವೇತನ ನೀಡಿಲ್ಲ. ಬಾಡಿಗೆಗೆ ನೀಡಿದ ಕಾರಿನ ಬಿಡಿ ಭಾಗಗಳನ್ನು ಕಳಚಿ ಅನ್ಯಾಯ ಮಾಡಿದ್ದಾರೆ. ಚುನಾವಣೆ ಸಂದರ್ಭ ಪಡೆದುಕೊಂಡ ವಾಹನಗಳಿಗೆ ಬಾಡಿಗೆ ಇನ್ನೂ ಸಿಕ್ಕಿಲ್ಲ ಎಂದು ಪಾರ್ವತಿ ಚೆಂಬುಗುಡ್ಡೆ ದೂರಿದರು. ಪೊಲೀಸ್ ಇಲಾಖೆಯಿಂದ ಪಡೆದುಕೊಂಡ ಎಲ್ಲ ವಾಹನಗಳ ಬಾಡಿಗೆ ಪಾವತಿಸಲಾಗಿದೆ. ಬೇರೆ ಇಲಾಖೆಯಿಂದ ಪಡೆದುಕೊಂಡ ವಾಹನಗಳ ವಿವರ ನೀಡುವಂತೆ ಆಯುಕ್ತರು ಸೂಚಿಸಿದರು.

ಅದ್ಯಪಾಡಿ ಪ್ರದೇಶದಲ್ಲಿ ರಾತ್ರಿ ವೇಳೆ ಯುವಕರು ಗುಂಪಾಗಿ ಕುಳಿತುಕೊಂಡು ಸಾರ್ವಜನಿಕರು ಹೋಗುವಾಗ ಕೆಟ್ಟ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಬಜ್ಪೆ ಠಾಣೆಗೆ ಈ ಬಗ್ಗೆ ದೂರು ನೀಡಿದ್ದರೂ ಯಾವುದೇ ಕ್ರಮ ಆಗಿಲ್ಲ ಎಂದು ಅಭಿಷೇಕ್ ಎಂಬವರು ದೂರಿದರು.
ಸಭೆಯಲ್ಲಿ ಡಿಸಿಪಿಗಳಾದ ಹನುಮಂತರಾಯ ಹಾಗೂ ಲಕ್ಷ್ಮೀ ಗಣೇಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News