ಮಂಗಳೂರು: ಡೆಂಗ್ ಹಾವಳಿ ಕಡಿವಾಣಕ್ಕೆ ಫ್ಲ್ಯಾಶ್ ಮಾಬ್
ಮಂಗಳೂರು, ಜು.28: ದ.ಕ. ಜಿಲ್ಲೆಯಾದ್ಯಂತ ಹರಡುತ್ತಿರುವ ಡೆಂಗ್ ಹಾವಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ವಿಜಯ ಕರ್ನಾಟಕ ದಿನ ಪತ್ರಿಕೆಯು ದ.ಕ. ಜಿಲ್ಲಾಡಳಿತ, ಜಿಪಂ ಹಾಗೂ ಮಂಗಳೂರು ಮಹಾನಗರ ಪಾಲಿಕೆ ಸಹಯೋಗದೊಂದಿಗೆ ನಗರದ ಮೂರು ಪ್ರಮುಖ ಮಾಲ್‌ಗಳಲ್ಲಿ ರವಿವಾರ ಸಹಿ ಅಭಿಯಾನ ಹಮ್ಮಿಕೊಂಡಿತು.
ಹಂಪನಕಟ್ಟೆಯ ಕೆ.ಎಸ್. ರಾವ್ ರಸ್ತೆಯಲ್ಲಿರುವ ಸಿಟಿ ಸೆಂಟರ್ ಮಾಲ್‌ನಲ್ಲಿ ಅಭಿಯಾನಕ್ಕೆ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಡೆಂಗ್ ನಿಯಂತ್ರಣಕ್ಕಿಂತ ಸೊಳ್ಳೆ ಉತ್ಪತ್ತಿ ತಾಣಗಳ ನಾಶವೇ ಮುಖ್ಯ ಉದ್ದೇಶವಾಗಿದೆ. ಜನರು ತಮ್ಮ ಮನೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ನೀರು ನಿಲ್ಲದಂತೆ ನೋಡಿಕೊಂಡು ಸಹಕಾರ ನೀಡಬೇಕು ಎಂದರು.
ಪರಿಸರಾಸಕ್ತರ ಒಕ್ಕೂಟದ ಸುರೇಶ್ ಶೆಟ್ಟಿ ಮಾತನಾಡಿ, 1996ರಿಂದ ಮಲೇರಿಯ, ಡೆಂಗ್ ವಿರುದ್ಧ ಜನಜಾಗೃತಿ ಮೂಡಿಸುತ್ತಿದ್ದರೂ ಸೊಳ್ಳೆಗಳ ಉತ್ಪತ್ತಿ ಸ್ಥಳಗಳ ನಾಶದ ಬಗ್ಗೆ ಜನಜಾಗೃತಿ ಮೂಡಿಸಿಲ್ಲ. ಕೇವಲ ಜಿಲ್ಲಾಧಿಕಾರಿ, ಮನಪಾದಿಂದ ಇದು ಸಾಧ್ಯವಿಲ್ಲ. ಇದಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದರು.
ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಮುಹಮ್ಮದ್ ನಝೀರ್, ಉಪ ಆಯುಕ್ತೆ ಗಾಯತ್ರಿ ನಾಯಕ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ರಾಮಕೃಷ್ಣ ರಾವ್, ಶ್ರೀನಿವಾಸ ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಡಾ.ಅಜಯ್, ಸಿನೆಮಾ ಕಲಾವಿದರಾದ ಪ್ರಥ್ವಿ ಅಂಬರ್, ನವ್ಯಾ ಪೂಜಾರಿ, ನಗರ ಸಂಶೋಧನಾ ಕೇಂದ್ರದ ಹರಿಣಿ ಮತ್ತಿತರರಿದ್ದರು.
ಶ್ರೀನಿವಾಸ ಕಾಲೇಜಿನ ವಿದ್ಯಾರ್ಥಿಗಳು ಫ್ಲ್ಯಾಶ್ ಮಾಬ್ ನಡೆಸಿಕೊಟ್ಟರು. ‘ಡೆಂಗೂ.... ಡೆಂಗೂ...’ ಹಾಡು ಸಹಿತ ಸಂಗೀತಕ್ಕೆ ನರ್ತಿಸಿ, ಮನೋರಂಜನೆ ಮೂಲಕ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದರು.
ನಂತರ ಫೋರಂ ಫಿಝ್ಝ ಮಾಲ್‌ನಲ್ಲಿ ಸಹಿ ಅಭಿಯಾನ ಮುಂದುವರಿತು. ಫೋರಂ ಮಾಲ್ ಮ್ಯಾನೇಜರ್ ಸುನಿಲ್ ಮತ್ತಿತರರಿದ್ದರು. ಸುರೇಶ್ ಶೆಟ್ಟಿ ಜನಜಾಗೃತಿ ಮೂಡಿಸಿದರು. ಸಾರ್ವಜನಿಕರು ಸಹಿ ಹಾಕಿದರು.
ಬಳಿಕ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಬಳಿಯ ಭಾರತ್ ಮಾಲ್‌ನಲ್ಲಿ ಸಹಿ ಅಭಿಮಾನ ನಡೆಸುವ ಮೂಲಕ ಸಮಾರೋಪ ಕಾರ್ಯಕ್ರಮ ನಡೆಯಿತು. ಭಾರತ್ ಮಾಲ್‌ನ ಮ್ಯಾನೇಜರ್ ಮಲ್ಲಿಕಾರ್ಜುನ, ವಿಜಯ ಕರ್ನಾಟಕ ಪತ್ರಿಕೆಯ ಸ್ಥಾನೀಯ ಸಂಪಾದಕ ಯು.ಕೆ.ಕುಮಾರ್‌ನಾಥ್, ಆರ್‌ಎಂಡಿ ವಿಭಾಗದ ನಾರಾಯಣ, ರೆಸ್ಪಾನ್ಸ್ ವಿಭಾಗದ ಡೆಪ್ಯುಟಿ ಚೀಫ್ ಮ್ಯಾನೇಜರ್ ಅರವಿಂದ ಉಪಸ್ಥಿತರಿದ್ದರು.
ನೂರಾರು ಮಂದಿ ಸಾರ್ವಜನಿಕರು ಸಹಿ ಸಂಗ್ರಹದಲ್ಲಿ ಪಾಲ್ಗೊಂಡರು. ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಎಲ್ಲರೂ ಬಿಳಿ ಬೋರ್ಡ್ ಮೇಲೆ ಸಹಿ ಹಾಕಿ ಸಂಭ್ರಮಿಸಿದರು.