ಇಂದ್ರಾಣಿ ಪರಿಶುದ್ಧವಾದರೆ ನಗರದ ಹಲವು ಸಮಸ್ಯೆ ಪರಿಹಾರ: ಡಾ.ಶ್ಯಾನುಭಾಗ್
ಉಡುಪಿ, ಜು.28: ಕೆಲವೇ ದಶಕಗಳ ಹಿಂದೆ ಪವಿತ್ರ ಆಗಿದ್ದ ಇಂದ್ರಾಣಿ ನದಿಯ ಈಗಿನ ರೂಪ ಉಡುಪಿಯಂತಹ ಸಾಂಸ್ಕೃತಿಕ ನಗರಕ್ಕೆ ಶೋಭೆ ತರು ವುದಿಲ್ಲ. ಇಂದ್ರಾಣಿ ನದಿ ಪರಿಶುದ್ಧವಾದರೆ ಉಡುಪಿ ನಗರದ ಹಲವು ಸಮಸ್ಯೆಗಳು ಪರಿಹಾರ ಆಗಲಿದೆ ಎಂದು ಉಡುಪಿ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ.ರವೀಂದ್ರನಾಥ್ ಶ್ಯಾನುಭಾಗ್ ಹೇಳಿದ್ದಾರೆ.
ಉಡುಪಿಯ ಪರಿಸರಾಸಕ್ತರು ವಿವಿಧ ಸಂಘಟನೆಗಳ ಸಹಭಾಗಿತ್ವದಲ್ಲಿ ಇಂದ್ರಾಣಿ ನದಿ ಉಳಿಸಿ ಅಭಿಯಾನದ ಪ್ರಯುಕ್ತ ಹಮ್ಮಿಕೊಳ್ಳಲಾದ ಬೈಕ್ ರ್ಯಾಲಿಗೆ ಇಂದ್ರಾಳಿ ಮುಖ್ಯಪ್ರಾಣ ದೇವರ ಗುಡಿಯ ಪುಷ್ಕರಣಿ ಬಳಿ ರವಿವಾರ ಚಾಲನೆ ನೀಡಿ ಅವರು ಮಾತನಾಡುತಿದ್ದರು.
ಶುದ್ಧ ಇಂದ್ರಾಣಿ ನದಿಯಿಂದ ನಗರದಲ್ಲಿ ವರ್ಷದುದ್ದಕ್ಕೂ ಕುಡಿಯುವ ನೀರು ಯತೇಚ್ಛವಾಗಿ ದೊರೆಯಲಿದೆ. ಅಲ್ಲದೆ ನದಿಯುದ್ದಕ್ಕೂ ವಾಸ ಮಾಡುವ ನಾಗರಿಕರೆಲ್ಲರು ದುರ್ವಾಸನೆ ಹಾಗೂ ರೋಗ ಮುಕ್ತ ಆಗಲಿದ್ದಾರೆ ಎಂದು ಅವರು ತಿಳಿಸಿದರು.
ಶತಶತಮಾನಗಳಿಂದ ಇಂದ್ರಾಳಿ ಬುಡ್ನಾರಿನಿಂದ ಕಲ್ಮಾಡಿವರೆಗೆ ಹರಿಯುತ್ತಿದ್ದ ಈ ನದಿ ನೂರಾರು ರೈತ ಕುಟುಂಬಗಳ ಜೀವನಾಡಿಯಾಗಿತ್ತು. ಇಂದು ಅಸಮರ್ಪಕ ಚರಂಡಿ ಯೋಜನೆಯಿಂದ ಈ ನದಿ ಕೊಳಕು ನೀರಿನ ಗಟಾರ ಆಗಿದೆ. ಹಲವಾರು ಕಡೆ ನದಿಯ ಇಕ್ಕೆಲಗಳಲ್ಲಿ ಒತ್ತುವರಿ ಮಾಡಲಾಗಿದೆ. ಇದರ ಪರಿಣಾಮವಾಗಿ ಉಡುಪಿ ನಗರವಾಸಿಗಳು ಹಲವು ರೋಗಗಳಿಂದ ಬಳಲುತ್ತಿದ್ದಾರೆ. ಇವಕ್ಕೆಲ್ಲ ಪರಿಹಾರ ಇಂದ್ರಾಣಿಯ ಪುನಶ್ಚೇತನವೇ ಹೊರತು ಅನ್ಯವಾರ್ಗವಿಲ್ಲ ಎಂದು ಅವರು ಹೇಳಿದರು.
ಮುಖ್ಯವಾಗಿ ಸರಕಾರ ಮಣಿಪಾಲದಿಂದ ಕುಂಜಿಬೆಟ್ಟುವರೆಗೆ ಒಳಚರಂಡಿ ಯೋಜನೆಯನ್ನು ಕೈಗೆತ್ತಿಕೊಳ್ಳಬೇಕು. ಅದೇ ರೀತಿ ಉಡುಪಿಯ ಅಸಮರ್ಪಕ ಹಾಗೂ ಕಡಿಮೆ ಸಾಮರ್ಥ್ಯದ ಒಳಚರಂಡಿಯ ಜಾಲವನ್ನು ಮೇಲ್ದರ್ಜೆಗೆ ಏರಿಸಬೇಕು. ಇದಕ್ಕೆ ಪೂರಕವಾಗಿ ನದಿಯ ಇಕ್ಕೆಲಗಳಲ್ಲಿ ವಾಸ ಮಾಡುತ್ತಿರುವ ನಾಗರಿಕರು ಸಹಕರಿಸಬೇಕು. ಹೀಗೆ ಜಾಗೃತ ನಾಗರಿಕ ಸಮಾಜದಿಂದ ಮಾತ್ರ ಇಂದ್ರಾಣಿಯ ಪುನಶ್ಚೇತನ ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯ ಪಟ್ಟರು.
ಇಂದ್ರಾಣಿ ಶ್ರೀಪಂಚದುರ್ಗ ಪರಮೇಶ್ವರಿ ದೇವಳದ ಆಡಳಿತ ಮೊಕ್ತೇಸರ ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ಇಂದ್ರಾಣಿ ನದಿಗೆ ಒಂದು ಸಾವಿರ ವರ್ಷಗಳ ಇತಿಹಾಸವಿದೆ. ಈ ನದಿಯ ನೀರಿನಿಂದಲೇ ಈ ಭಾಗದ ಜನರು ಕೃಷಿ ಮಾಡುತ್ತಿದ್ದರು. ಆದರೆ ಈಗ ಜನರಲ್ಲಿ ಕೃಷಿ ವ್ಯಾಮೋಹವೂ ಕಡಿಮೆ ಆಗಿದೆ. ಇದರಿಂದ ಇಂದು ನದಿ ಕಲುಷಿತಗೊಂಡಿದೆ. ಆದುದರಿಂದ ಜನ ಎಚ್ಚೆತ್ತುಕೊಂಡು ಪ್ರಕೃತಿ ರಕ್ಷಣೆ ಮಾುವ ಕಾರ್ಯ ಮಾಡಬೇಕು ಎಂದರು.
ಪರಿಸರಾಸಕ್ತರಾದ ಪ್ರೇಮಾನಂದ ಕಲ್ಮಾಡಿ, ವಿಜಯ ಕೊಡವೂರು, ಪ್ರಕಾಶ್ ಮಲ್ಪೆ, ಪೂರ್ಣಿಮಾ ಜನಾರ್ದನ್, ಮುಹಮ್ಮದ್ ಮೌಲ, ಎಸ್.ಎ.ಕೃಷ್ಣಯ್ಯ, ಸಂಘಟಕ ಶ್ರೀಕಾಂತ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಬಳಿಕ ಇಂದ್ರಾಣಿ ನದಿ ಉಗಮ ಸ್ಥಾನದಿಂದ ಆರಂಭ ಗೊಂಡ ಬೈಕ್ ರ್ಯಾಲಿ ನದಿ ಹರಿಯುವ ಮಾರ್ಗವಾಗಿ ಇಂದ್ರಾಳಿ, ಕಲ್ಸಂಕ, ಗುಂಡಿಬೈಲು, ಅಂಕದಕಟ್ಟೆ ಮೂಲಕ ಮೂಡುಬೆಟ್ಟುವಾಗಿ ಸಾಗಿ ಕೊಡವೂರಿನಲ್ಲಿ ಸಮಾಪ್ತಿಗೊಂಡಿತು.