ಸಾಹಿತಿ ಶ್ರೀನಿವಾಸ ದೇವೇಂದ್ರ ಪೆಜತ್ತಾಯ ನಿಧನ
ಉಡುಪಿ, ಜು.28: ಸಾಹಿತಿ ಹಾಗೂ ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಪ್ರಬಂಧಕ ಶ್ರೀನಿವಾಸ ದೇವೇಂದ್ರ ಪೆಜತ್ತಾಯ(88) ಇಂದು ಮುಂಜಾನೆ ಅಲ್ಪ ಕಾಲದ ಅಸೌಖ್ಯದಿಂದ ನಿಧನರಾದರು.
ಪಲಿಮಾರು ಗ್ರಾಪಂ ಅಧ್ಯಕ್ಷರಾಗಿದ್ದ ಪೆಜತ್ತಾಯ, 1960ದಿಂದ 70ರ ದಶಕದವರೆಗೆ ಪಲಿಮಾರು ಮಠದ ದಿವಾನರಾಗಿ ಸೇವೆ ಸಲ್ಲಿಸಿದ್ದರು. ಮುಂದೆ ಮಣಿಪಾಲದ ಮಾಧವ ಪೈ ಹಾಗೂ ಟಿ.ಎ.ಪೈಯವರಿಗೆ ಆಪ್ತರಾಗಿ ಅವರ ಜೊತೆ ಎರಡು ದಶಕಗಳ ಕಾಲ ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸಿದ್ದರು.
ಬ್ಯಾಂಕಿನಲ್ಲಿ ನಿವೃತ್ತಿ ಪಡೆದ ನಂತರ ಕನ್ನಡ ಹಾಗೂ ತುಳುಭಾಷೆಯಲ್ಲಿ ಅನೇಕ ಕೃತಿಗಳನ್ನು ರಚಿಸಿದ ಪೆಜತ್ತಾಯರಿಗೆ ಹಲವು ಪ್ರಶಸ್ತಿಗಳು ದೊರೆತಿವೆ. 15ನೆ ಶತಮಾನದಲ್ಲಿ ವಾದಿರಾಜರು ರಚಿಸಿದ ಶ್ರೀಲಕ್ಷ್ಮೀ ಶೋಭಾನೆ ಹಾಡನ್ನು ಮೊತ್ತ ಮೊದಲ ಬಾರಿಗೆ ತುಳು ಭಾಷೆಗೆ ಭಾಷಾಂತರ ಮಾಡಿದ್ದರು. ಭಕ್ತ ಕನಕದಾಸರ ಕನಕೋಪನಿಷತ್ನ ಭಾಷಾಂತರ ಇವರ ಇನ್ನೊಂದು ಸಾಧನೆ.
ಕನ್ನಡ ಸಾಹಿತ್ಯದಲ್ಲೂ ಕಥೆ, ಕವನ, ಕೀರ್ತನೆಗಳನ್ನು ಇವರು ರಚಿಸಿದ್ದಾರೆ. ಮೃತರು ಪತ್ನಿ ರತ್ನಮ್ಮ, ಓರ್ವ ಪುತ್ರ ಹಾಗೂ ಮೂವರು ಪುತ್ರಿಯರು ಹಾಗೂ ಅಪಾರ ಬಂಧುಮಿತ್ರನ್ನು ಅಗಲಿದ್ದಾರೆ.