ಕಟ್ಟಡ ಕಾರ್ಮಿಕರಿಗೆ ಅಧ್ಯಯನ ತರಬೇತಿ ಶಿಬಿರ
ಬೈಂದೂರು, ಜು.28: ಬೈಂದೂರು ತಾಲೂಕು ಕಟ್ಟಡ ಮತ್ತು ಇತರೆ ಕಾರ್ಮಿಕರ ಸಂಘದ ನೂತನ ಕಚೇರಿ ಉದ್ಘಾಟನೆ ಹಾಗೂ ಕಾರ್ಮಿಕರಿಗೆ ಅಧ್ಯಯನ ಶಿಬಿರವನ್ನು ರವಿವಾರ ನೂತನ ಕಚೇರಿಯಲ್ಲಿ ಏರ್ಪಡಿಸಲಾಗಿತ್ತು.
ಸಂಘದ ನೂತನ ಕಚೇರಿಯನ್ನು ಉದ್ಘಾಟಿಸಿದ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಮಹಾಂತೇಶ, ಕಟ್ಟಡ ಕಾರ್ಮಿಕರ ಪರಿಸ್ಥಿತಿ, ಈಗ ಇರುವ ಸೌಲಭ್ಯಗಳು, ಮೋದಿ ಸರಕಾರ ಜಾರಿ ಮಾಡುತ್ತಿರುವ ಸಾಮಾಜಿಕ ಸುರಕ್ಷತಾ ಕಾಯ್ದೆಯ ಪರಿಣಾಮಗಳು ಹಾಗೂ ಸಂಘಟನೆ ಮಹತ್ವ ಕುರಿತು ಉಪನ್ಯಾಸ ನೀಡಿದರು.
ಶಿಬಿರವನ್ನು ಉದ್ಘಾಟಿಸಿದ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಶಂಕರ್ ಮಾತನಾಡಿ, ಬೈಂದೂರು ಪ್ರದೇಶದಲ್ಲಿ ಕಾರ್ಮಿಕ ಚಳವಳಿ ಬಲಿಷ್ಟ ಗೊಳಿಸಲು ಮತ್ತು ದುಡಿಯುವ ವರ್ಗದ ರಾಜಕೀಯವನ್ನು ಜನರ ಮಧ್ಯೆ ಪ್ರಚಾ ಮಾಡಬೇಕೆಂದು ಕರೆ ನೀಡಿದರು.
ಸಿಐಟಿಯು ಕುಂದಾಪುರ ತಾಲೂಕು ಅಧ್ಯಕ್ಷ ಎಚ್.ನರಸಿಂಹ, ಕೃಷಿಕೂಲಿ ಕಾರರ ಸಂಘದ ನಾಗರತ್ನ, ಅಕ್ಷರ ದಾಸೋಹ ನೌಕರರ ಸಂಘದ ಜಯಶ್ರೀ ಪಡುವರಿ, ಅಂಗವಿಕಲ ಸಂಘದ ಮಂಜುನಾಥ ಹೆಬ್ಬಾರ ಮಾತನಾಡಿದರು. ಅಧ್ಯಕ್ಷತೆಯನ್ನು ರಾಜು ಪಡುಕೋಣೆ ವಹಿಸಿದ್ದರು.
ಕಾರ್ಯದರ್ಶಿ ಗಣೇಶ ತೊಂಡೆಮಕ್ಕಿ ಸ್ವಾಗತಿಸಿದರು ಉಪಾಧ್ಯಕ್ಷ ವೆಂಕಟೇಶ ಕೋಣೆ ಕಾರ್ಯಕ್ರಮ ನಿರೂಪಿಸಿದರು. ಶ್ರೀಧರ ಉಪ್ಪುಂದ ವಂದಿಸಿದರು.