ಸ್ವೀಕರ್ ತೀರ್ಪು ಪ್ರಜಾಪ್ರಭುತ್ವಕ್ಕೆ ಸಂದ ನೈಜ ಗೆಲವು: ಕಾಂಗ್ರೆಸ್
ಉಡುಪಿ: ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಸರಕಾರದ ವಿರುದ್ಧ ಬಂಡಾಯವೆದ್ದು ವಿಶ್ವಾಸ ಮತ ಸಂದರ್ಭದಲ್ಲಿ ಗೈರು ಹಾಜರಾಗಿದ್ದ 14 ಅತೃಪ್ತ ಶಾಸಕನ್ನು ಪಕ್ಷಾಂತರ ಕಾಯಿದೆಯಡಿ ಅನರ್ಹಗೊಳಿಸಿ ಸ್ವೀಕರ್ ಅವರು ಆದೇಶ ಹೊರಡಿಸಿರುವುದು ಪ್ರಜಾಪ್ರಭುತ್ವಕ್ಕೆ ಸಂದ ಗೆಲವು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಹರ್ಷ ವ್ಯಕ್ತಪಡಿಸಿದೆ.
ಸ್ವಾರ್ಥ ಸಾಧನೆ ಮತ್ತು ಅಧಿಕಾರದಾಸೆಯೊಂದಿಗೆ ಜನಾದೇಶವನ್ನು ದಿಕ್ಕರಿಸಿ ಬಿಜೆಪಿಯೊಂದಿಗೆ ಕೈ ಜೊಡಿಸಿದ ಅತೃಪ್ತರು ತಮ್ಮ ಪಕ್ಷ ಮತ್ತು ತಮ್ಮನ್ನು ಆಯ್ಕೆ ಮಾಡಿದ ಜನತೆಗೆ ದ್ರೋಹ ಬಗೆದಿರುವುದು ಖಂಡನೀಯ. ಈ ಶಾಸಕರುಗಳಿಗೆ ಜನತಾ ನ್ಯಾಯಾಲಯ ಕೂಡಾ ಮುಂದಿನ ದಿನಗಳಲ್ಲಿ ತಕ್ಕ ಶಿಕ್ಷೆಯನ್ನು ವಿಧಿಸಲಿದೆ ಎಂದು ಕಾಂಗ್ರೆಸ್ ತಿಳಿಸಿದೆ.
ಈ ತೀರ್ಪಿನಿಂದಾಗಿ 15ನೇ ವಿಧಾನಸಭೆಯ ಅವಧಿ ಮುಗಿಯುವವರೆಗೂ ಚುನಾವಣೆಯಲ್ಲಿ ನಿಂತು ಹೋರಾಡಲು ಅನರ್ಹರಿಗೆ ಸಾಧ್ಯವಿಲ್ಲವಾಗಿದೆ. ಸ್ವೀಕರ್‌ರವರ ಈ ತೀರ್ಪಿನಿಂದ ಅವಕಾಶವಾದಿ ರಾಜಕಾರಣ ಅಂತ್ಯಗೊಳ್ಳ ಬೇಕು ಎಂದು ಉಡುಪಿ ಜಿಲ್ಲಾ ಕಾಂಗ್ರೆಸಿನ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ನರಸಿಂಹಮೂರ್ತಿ ಹಾಗೂ ಜಿಲ್ಲಾ ವಕ್ತಾರ ಭಾಸ್ಕರ ರಾವ್ ಕಿದಿಯೂರು ಹೇಳಿಕೆಯಲ್ಲಿ ತಿಳಿಸಿದ್ದಾರೆ.