ಡೆಂಗ್ ವಿರುದ್ಧ ‘ಡ್ರೈ ಡೇ’ ಅಭಿಯಾನ: ಡಿವೈಎಫ್‌ಐನಿಂದ ಜಾಗೃತಿ
ಮಂಗಳೂರು, ಜು.28: ದ.ಕ. ಜಿಲ್ಲಾಡಳಿತ, ನಗರ ಪಾಲಿಕೆ, ಆರೋಗ್ಯ ಇಲಾಖೆಗಳ ಡೆಂಗ್ ವಿರುದ್ಧ ಅಭಿಯಾನದ ‘ಡ್ರೈ ಡೇ’ ದಿನವಾದ ರವಿವಾರ ಡಿವೈಎಫ್‌ಐ ಪಂಜಿಮೊಗರು ಘಟಕದಿಂದ ಪಂಜಿಮೊಗರು ವಾರ್ಡ್‌ನಲ್ಲಿ ಮನೆಮನೆಗೆ ಭೇಟಿ ನೀಡಿ, ಡೆಂಗ್ ವಿರುದ್ಧ ಜನಜಾಗೃತಿ ಮೂಡಿಸಲಾಯಿತು.
ಪ್ರಚಾರ ಅಭಿಯಾನವನ್ನು ವಿದ್ಯಾನಗರದಲ್ಲಿ ಸ್ಥಳೀಯ ಕಾರ್ಪೊರೇಟರ್ ದಯಾನಂದ ಶೆಟ್ಟಿ ಉದ್ಘಾಟಿಸಿದರು. ಡೆಂಗ್ ಜಿಲ್ಲೆಯಾದ್ಯಂತ ವ್ಯಾಪಕವಾಗಿ ಹರಡುತ್ತಿದೆ. ಡೆಂಗ್ ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲು ತಿಳುವಳಿಕೆ ನೀಡಲಾಯಿತು.
ಮನೆ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳವುದು, ಟೈರ್, ಬಾಟಲ್ ಮುಂತಾದವುಗಳನ್ನು ತೆರವುಗೊಳಿಸಿ ಸೊಳ್ಳೆಗಳು ಸಂತಾನೋತ್ಪತ್ತಿ ನಡೆಸದಂತೆ ಜಾಗೃತಿ ವಹಿಸಲು ಮನವಿ ಮಾಡಲಾಯಿತು. ಉಪಯೋಗಕ್ಕಿಲ್ಲದ ಪಾತ್ರೆಗಳನ್ನು ಮಗುಚಿ ಹಾಕಬೇಕು. ಬಳಕೆಯ ನೀರು ಸಂಗ್ರಹಿಸುವ ಪಾತ್ರೆಗಳನ್ನು ಮುಚ್ಚಿಡಬೇಕೆಂದು ತಿಳಿಸಿದರು.
ವಾರ್ಡ್‌ನಾದ್ಯಂತ ವಾಹನ ಮೂಲಕ ಧ್ವನಿವರ್ಧಕದಲ್ಲಿ ಪ್ರಚಾರ ನಡೆಸಲಾಯಿತು. ಪ್ರಚಾರ ಅಭಿಯಾನದ ಮುಂದಾಳತ್ವವನ್ನು ಡಿವೈಎಫ್‌ಐ ಪಂಜಿಮೊಗರು ಘಟಕದ ಅನಿಲ್ ಡಿಸೋಜ, ಖಲೀಲ್, ಮುಸ್ತಾಫ, ಹನುಮಂತ, ಆಕಾಶ್, ಶರಣ್‌ದೀಪ್ ಮತ್ತಿತರರು ವಹಿಸಿದ್ದರು.