ಅಳಿಯೂರು: ಓಡಿದನುಭವ-ಕವನ ಸಂಕಲನ ಬಿಡುಗಡೆ
ಮೂಡುಬಿದಿರೆ: ಸರ್ಕಾರಿ ಶಾಲೆಯ ಶಿಕ್ಷಕರು ಸಾಹಿತ್ಯಾಸಕ್ತಿಯನ್ನು ವಿದ್ಯಾರ್ಥಿಗಳಲ್ಲಿ ಮೂಡಿಸುವಂತ ಪ್ರಯತ್ನ ಮಾಡಬೇಕು. ಈ ನಿಟ್ಟಿನಲ್ಲಿ ಶಿಕ್ಷಕ ಮಹಾದೇವ ಅವರು ಸ್ವತಃ ಸಾಹಿತಿಯಾಗಿ ವಿದ್ಯಾರ್ಥಿಗಳನ್ನು ಕಲೆ, ಸಾಹಿತ್ಯದ ಅಭಿರುಚಿಯನ್ನು ಬೆಳೆಸುತ್ತಿರುವುದು ಶ್ಲಾಘನೀಯ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಅಭಿಪ್ರಾಯಪಟ್ಟರು.
ಅಳಿಯೂರು ಹೇಮಾ ಸಭಾಭವನದಲ್ಲಿ ಶನಿವಾರ ನಡೆದ ಮಹಾದೇವ ಮೂಡುಕೊಣಾಜೆ ಅವರ ` ಓಡಿದನುಭವ' ಕವನ ಸಂಕಲನ ಕೃತಿಬಿಡುಗಡೆ ಸಮಾರಂಭದ ಅಧ್ಯಕ್ಷತೆವಹಿಸಿದರು. ಸರ್ಕಾರಿ ಶಾಲೆಗಳನ್ನು ಮಾದರಿಯನ್ನಾಗಿಸಲು ಸರ್ಕಾರ ಯೋಜನೆ ರೂಪಿಸಬೇಕು ಎಂದರು.
ಕವನ ಸಂಕಲನ ಕೃತಿಯನ್ನು ಹಿರಿಯ ಸಾಹಿತಿ ಪ್ರೊ.ಚಿತ್ರಪಾಡಿ ಉಪೇಂದ್ರ ಸೋಮಯಾಜಿ ಬಿಡುಗಡೆಗೊಳಿಸಿದರು. ವಿಧಾನ ಪರಿಷತ್ ಮಾಜಿ ಸಚೇತಕ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಉದ್ಯಮಿ ಶ್ರೀಪತಿ ಭಟ್, ಹೇಮ ಸಭಾಭವನದ ಮಾಲಕಿ ಹೇಮಾವತಿ ಕೆ. ಪೂಜಾರಿ, ಸಂಗೀತ ನಿರ್ದೇಶಕ ಪ್ರಮೋದ್ ಸಪ್ರೆ, ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ ರಾಮಕೃಷ್ಣ ಶಿರೂರು , ಸರ್ಕಾರಿ ಪ್ರೌಢಶಾಲೆ ಅಳಿಯೂರು ಎಸ್‍ಡಿಎಂಸಿ ಅಧ್ಯಕ್ಷ ವಿಶ್ವನಾಥ ಸಾಲ್ಯಾನ್ ಉಪಸ್ಥಿತರಿದ್ದರು.
ಆಳ್ವಾಸ್ ಪಿಯು ಕಾಲೇಜು ಕಲಾ ವಿಭಾಗದ ಮುಖ್ಯಸ್ಥ ವೇಣುಗೋಪಾಲ್ ಶೆಟ್ಟಿ ಮತ್ತು ಮೂಡುಬಿದಿರೆ ಜೈನ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಮುನಿರಾಜ ರೆಂಜಾಳ ಕವನ ಸಂಕಲನದ ಪುಸ್ತಕವನ್ನು ಪರಿಚಯಿಸಿದರು.
ಪ್ರೊ. ಚಿತ್ರಪಾಡಿ ಉಪೇಂದ್ರ ಸೋಮಯಾಜಿ ಹಾಗೂ ರಾಮಕೃಷ್ಣ ಶಿರೂರು ಅವರನ್ನು ಸನ್ಮಾನಿಸಲಾಯಿತು. ಸವಿತಾ ಪೂಜಾರಿ ಸ್ವಾಗತಿಸಿದರು. ನಾಟಕಕಾರ ಗಣೇಶ್ ಬಿ. ಅಳಿಯೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸುನೀಲ್ ಪಣಪಿಲ ಕಾರ್ಯಕ್ರಮ ನಿರೂಪಿಸಿ ದರು. ಮಹಾದೇವ ಮೂಡುಕೊಣಾಜೆ ವಂದಿಸಿದರು.