×
Ad

ಬೆಂಗ್ರೆಯಲ್ಲಿ ಸಮುದ್ರಪಾಲಾದ ನಾಡದೋಣಿ: ಮೂವರ ರಕ್ಷಣೆ

Update: 2019-07-28 21:16 IST

ಮಂಗಳೂರು: ಬೆಂಗ್ರೆ ಅಳಿವೆ ಬಾಗಿಲುವಿನಲ್ಲಿ ರವಿವಾರ ಸಂಜೆ ಅಲೆಗಳ ಅಬ್ಬರಕ್ಕೆ ನಾಡದೋಣಿಯೊಂದು ಮಗುಚಿಬಿದ್ದಿದ್ದು, ಅಧಿಕಾರಿಗಳು ಹಾಗೂ ಸ್ಥಳೀಯರು ಕಾರ್ಯಾಚರಣೆ ನಡೆಸಿ ಮೂವರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಉಳ್ಳಾಲ ಕೋಟೆಪುರ ನಿವಾಸಿಗಳಾದ ಆಸಿಫ್ (43), ಇಮ್ರಾನ್ (19), ಇಸ್ಮಾಯೀಲ್ (45) ಪ್ರಾಣಾಪಾಯದಿಂದ ಪಾರಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ರವಿವಾರ ಸಂಜೆ 5:30ರ ವೇಳೆ ಕೋಟೆಪುರದ ಆಸಿಫ್ ಅವರಿಗೆ ಸೇರಿದ ‘ಹಯಾನ್’ ಎಂಬ ಮೀನುಗಾರಿಕೆ ದೋಣಿ ಸುರತ್ಕಲ್ ಸಮೀಪ ಮೀನುಗಾರಿಕೆ ನಡೆಸುತ್ತಿದ್ದಾಗ ಇಂಜಿನ್ ಕೆಟ್ಟು ಹೋಗಿತ್ತು. ಇದರ ಇಂಜಿನ್ ಬದಲು ಮಾಡಲು ಇಕ್ಬಾಲ್ ಎಂಬವರ ಮಾಲಕತ್ವದ ‘ಸೈಯದ್ ಮದನಿ’ ದೋಣಿಯಲ್ಲಿ ಕೋಟೆಪುರದ ಇಕ್ಬಾಲ್, ಆಸಿಫ್, ಇಸ್ಮಾಯೀಲ್ ಕೋಟೆಪುರದಿಂದ ಸುರತ್ಕಲ್‌ಗೆ ತೆರಳಿ ಇಂಜಿನ್ ನೀಡಿದ್ದರು.

ಆ ಬಳಿಕ ಕೋಟೆಪುರದತ್ತ ಮರಳುತ್ತಿದ್ದಾಗ ಅಳಿವೆಬಾಗಿಲಿನ ಬಳಿ ಅಲೆಗಳ ಅಬ್ಬರಕ್ಕೆ ದೋಣಿ ಮಗುಚಿ ಬಿದ್ದಿದೆ. ಈ ಸಂದರ್ಭ ದೋಣಿಯಲ್ಲಿದ್ದ ಮೂವರು ನೀರಿಗೆಸೆಯಲ್ಪಟ್ಟು ಸಮುದ್ರ ಅಲೆಗಳ ರಭಸಕ್ಕೆ ಈಜಲಾಗದೆ ಸಹಾಯಕ್ಕಾಗಿ ಯಾಚಿಸುತ್ತಿದ್ದರು.

ಅಪಾಯವನ್ನು ಅರಿತ ಮಂಗಳೂರು ಕರಾವಳಿ ಕಾವಲು ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ವೈ.ಗಂಗೀರೆಡ್ಡಿ, ಎಸ್ಸೈಗಳಾದ ರೇವಣ್ಣ, ಆನಂದ್, ತಾರಾನಾಥ ಹಾಗೂ ಸಿಬ್ಬಂದಿ ಸುರೇಶ್ ಕುಂದರ್, ನರೇಶ್ ಕೋಟ್ಯಾನ್, ನಾಸಿರ್, ಕರಾವಳಿ ನಿಯಂತ್ರಣ ದಳ (ಕೆಎಲ್‌ಇ) ಸದಸ್ಯರಾದ ಹರ್ಷಿತ್ ಖಾರ್ವಿ, ರಾಜೇಶ್, ತುಕಾರಾಮ್, ಸ್ಥಳೀಯರ ಮೀನುಗಾರರು ಹಾಗೂ ಸೃಳೀಯರ ನಾಗರಿಕರ ಸಹಕಾರದಿಂದ ನೀರಿನಿಂದ ಮೇಲಕ್ಕೆತ್ತಿದ್ದಾರೆ.

ದೋಣಿಯು ಸಮುದ್ರದಲ್ಲಿ ತೇಲುತ್ತಾ ಬಂದು ಅಳಿವೆ ಬಾಗಿಲಿನ ಉತ್ತರ ದಿಕ್ಕಿನ ಬೆಂಗ್ರೆ ಬಳಿಯ ಸಮುದ್ರ ತಡೆಗೋಡೆಗೆ ತಾಗಿದ್ದು ಸಂಪೂರ್ಣ ಜಖಂಗೊಂಡಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News