ದಲಿತ ಶಾಸಕಿ ಧರಣಿ ನಡೆಸಿದ ಸ್ಥಳದಲ್ಲಿ ಸೆಗಣಿಯಿಂದ “ಶುದ್ಧೀಕರಣ” ನಡೆಸಿದ ಯುವ ಕಾಂಗ್ರೆಸ್ ಕಾರ್ಯಕರ್ತರು

Update: 2019-07-28 17:30 GMT

ತ್ರಿಶೂರ್,ಜು.28: ಕೇರಳದಲ್ಲಿ ಸಿಪಿಐ ಪಕ್ಷದ ದಲಿತ ಶಾಸಕಿ ಧರಣಿ ನಡೆಸಿದ ಸ್ಥಳದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಶುದ್ಧೀಕರಣ ಕ್ರಿಯೆ ನಡೆಸಿರುವುದು ವಿವಾದಕ್ಕೆ ಗ್ರಾಸವಾಗಿದೆ. ಇದನ್ನು ಜಾತಿವಾದ ಎಂದು ಟೀಕಿಸಿರುವ ದಲಿತ ಶಾಸಕಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ರಾಜ್ಯದ ಸಚಿವರೂ ಯುವ ಕಾಂಗ್ರೆಸ್ ಕಾರ್ಯಕರ್ತರ ಕ್ರಮವನ್ನು ಖಂಡಿಸಿದ್ದು ಇಂತಹ ವರ್ತನೆಗಳನ್ನು ಒಪ್ಪಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಕೇರಳದ ನಟ್ಟಿಕದ ಸಿಪಿಐ ಶಾಸಕಿ ಗೀತಾ ಗೋಪಿ ಶನಿವಾರದಂದು ಚೆರ್ಪು ಎಂಬಲ್ಲಿ ಹದಗೆಟ್ಟಿರುವ ಸ್ಥಳೀಯ ರಸ್ತೆಗಳ ವಿರುದ್ಧ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಕಚೇರಿಯ ಎದುರು ಧರಣಿ ನಡೆಸಿದ್ದರು. ಇದಕ್ಕೆ ವಿರುದ್ಧವಾಗಿ ಪ್ರತಿಭಟನೆ ನಡೆಸಿದ ಯುವ ಕಾಂಗ್ರೆಸ್ ಕಾರ್ಯಕರ್ತರು, ಶಾಸಕಿಯ ಧರಣಿ ಜನರನ್ನು ಮೂರ್ಖಗೊಳಿಸುವ ತಂತ್ರ ಎಂದು ದೂರಿದ್ದರು. ನಂತರ ಶಾಸಕಿ ಧರಣಿ ಕುಳಿತಿದ್ದ ಸ್ಥಳಕ್ಕೆ ಸೆಗಣಿ ಮಿಶ್ರಿತ ನೀರನ್ನು ಪ್ರೋಕ್ಷಿಸಿ ಸೂಚ್ಯವಾಗಿ ಶುದ್ಧೀಕರಣ ಕ್ರಿಯೆ ನಡೆಸಿದ್ದರು. ಯುವ ಕಾಂಗ್ರೆಸ್ ಕಾರ್ಯಕರ್ತರ ಕ್ರಮವನ್ನು ಖಂಡಿಸಿರುವ ಕೇರಳ ಸಂಸ್ಕೃತಿ ಸಚಿವ ಎ.ಕೆ ಬಾಲನ್, ಇಂತಹ ಶುದ್ಧೀಕರಣ ಕ್ರಿಯೆಗಳನ್ನು ಸಾಮಾನ್ಯವಾಗಿ ಉತ್ತರ ಭಾರತದಲ್ಲಿ ಕಾಣಬಹುದಾಗಿದೆ. ಅದನ್ನು ಇಲ್ಲಿ ಒಪ್ಪಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News