ಗುಜರಾತ್: ಬಾಲಕನ ಥಳಿಸಿ ಹತ್ಯೆ ಪ್ರಕರಣ; ನಾಲ್ವರು ಆರೋಪಿಗಳ ಬಂಧನ

Update: 2019-07-28 17:09 GMT

ಗಾಂಧಿನಗರ, ಜು. 28: ಬುಡಕಟ್ಟು ಬಾಲಕಿಯನ್ನು ಪ್ರೀತಿಸುತ್ತಿದ್ದ ಆರೋಪದಲ್ಲಿ 17 ವರ್ಷದ ಮುಸ್ಲಿಂ ಬಾಲಕನನ್ನು ಗುಂಪೊಂದು ಥಳಿಸಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಶನಿವಾರ ನಾಲ್ವರನ್ನು ಬಂಧಿಸಿದ್ದಾರೆ. ಗುಂಪಿನಿಂದ ಥಳಿತಕ್ಕೊಳಗಾಗಿ ಮೃತಪಟ್ಟ ಬಾಲಕನನ್ನು ಫಯಾಝ್ ಎಂದು ಗುರುತಿಸಲಾಗಿದೆ.

 ‘‘ಝಗಾಡಿಯಾ ತಾಲೂಕಿನಲ್ಲಿ ಜುಲೈ 24ರಂದು ಫಯಾಝ್‌ನನ್ನು ಥಳಿಸಿ ಹತ್ಯೆಗೈಯಲಾಗಿತ್ತು. ಈ ಘಟನೆ ಕುರಿತಂತೆ ಝಗಾಡಿಯಾ ಪೊಲೀಸ್ ಠಾಣೆಯಲ್ಲಿ ಪ್ರಥಮ ಮಾಹಿತಿ ವರದಿ ದಾಖಲಿಸಲಾಗಿತ್ತು ಹಾಗೂ ತನಿಖೆ ಆರಂಭಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಇದುವರೆಗೆ ನಾಲ್ಕು ಮಂದಿಯನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳನ್ನು ಬಂಧಿಸಲು ಶೋಧ ಕಾರ್ಯಾಚರಣೆ ಮುಂದುವರಿದಿದೆ’’ ಎಂದು ಅಂಕ್ಲೇಶ್ವರದ ಉಪ ಎಸ್‌ಪಿ ಎಲ್.ಎ. ಝಾಲಾ ತಿಳಿಸಿದ್ದಾರೆ.

 ‘‘ನನ್ನ ಪುತ್ರ ಆತನ ಐವರು ಗೆಳೆಯರೊಂದಿಗೆ ಅಂಕ್ಲೇಶ್ವರಕ್ಕೆ ತೆರಳಿದ್ದ ಸಂದರ್ಭ ಈ ಘಟನೆ ನಡೆದಿದೆ’’ ಎಂದು ಫಯಾಝ್‌ನ ತಂದೆ ಮುಹಮ್ಮದ್ ಸುಲ್ತಾನ್ ಅಬ್ದುಲ್ ರಹೀಮ್ ಖುರೇಶಿ ಹೇಳಿದ್ದಾರೆ. ‘‘ನನ್ನ ಪತ್ನಿ ಫಯಾಝ್‌ಗೆ ಕರೆ ಮಾಡಿದ್ದಳು. ಆಗ ಆತ, ತನ್ನನ್ನು ಕರೆದೊಯ್ಯಲು ಬೊರಿದ್ರಾಕ್ಕೆ ಆಗಮಿಸುವಂತೆ ತಿಳಿಸಿದ್ದ. ನಾನು ಅಲ್ಲಿಗೆ ಹೋದಾಗ, ಆತ ಕೆಲವು ಜನರಿಂದ ಥಳಿತಕ್ಕೊಳಗಾಗಿ ಮೇಲೇಳಲಾಗದ ಸ್ಥಿತಿಯಲ್ಲಿ ಬಿದ್ದುಕೊಂಡಿದ್ದ. ಕೂಡಲೇ ಆತನನ್ನು ಎರಡು ಬೇರೆ ಬೇರೆ ಆಸ್ಪತ್ರೆಗೆ ಕರೆದೊಯ್ದೆ. ಆದರೆ, ಆತನನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ’’ ಎಂದು ಖುರೇಶಿ ಹೇಳಿದ್ದಾರೆ.

ಥಳಿತದಿಂದ ಅವನ ಕೈ, ಪಿತ್ತಕೋಶ ಹಾಗೂ ಪಕ್ಕೆಲುಬು ತೀವ್ರವಾಗಿ ಜಖಂಗೊಂಡಿತ್ತು. ಆತ ಬದುಕುವ ಸಾಧ್ಯತೆ ಅತಿ ಕಡಿಮೆ ಎಂದು ವೈದ್ಯರು ನನಗೆ ತಿಳಿಸಿದ್ದರು. ಆದುದರಿಂದ ನಾನು ಆತನನ್ನು ಸೂರತ್‌ನಲ್ಲಿರುವ ಇನ್ನೊಂದು ಆಸ್ಪತ್ರೆಗೆ ಕರೆದೊಯ್ದೆ. ವೈದ್ಯರು ಆತನಿಗೆ ಚಿಕಿತ್ಸೆ ನೀಡಲು ಪ್ರಯತ್ನಿಸಿದರು. ಆದರೆ, ಆತ ಮೃತಪಟ್ಟ’’ ಎಂದು ಅವರು ತಿಳಿಸಿದ್ದಾರೆ.

ನಾನು ನನ್ನ ಪುತ್ರನಿಗೆ ನ್ಯಾಯ ನೀಡುವಂತೆ ಆಗ್ರಹಿಸುತ್ತೇನೆ. ಆತನಿಗೆ ಥಳಿಸಿದ ಗುಂಪಿನಲ್ಲಿ ಎಷ್ಟು ಮಂದಿ ಇದ್ದರು ಎಂದು ನನಗೆ ಗೊತ್ತಿಲ್ಲ. ಆದರೆ, ಅವರು ನನ್ನ ಪುತ್ರನಿಗೆ ವಿವೇಚನಾರಹಿತವಾಗಿ ಥಳಿಸಿದರು. ನಮಗೆ ನ್ಯಾಯ ಬೇಕು. ಆರೋಪಿಗಳಿಗೆ ಶಿಕ್ಷೆ ನೀಡಬೇಕು ಎಂದು ನಾನು ಆಗ್ರಹಿಸುತ್ತೇನೆ. ಪೊಲೀಸ್ ಹಾಗೂ ಸರಕಾರದಿಂದ ನ್ಯಾಯ ಸಿಗುತ್ತದೆ ಎಂದು ನನಗೆ ಭರವಸೆ ಇದೆ ಎಂದು ಖುರೇಶಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News