ನಾಯಕತ್ವದ ಕುರಿತ ಅಸ್ಪಷ್ಟತೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಹಾನಿ: ಶಶಿ ತರೂರ್

Update: 2019-07-28 17:17 GMT

ಹೊಸದಿಲ್ಲಿ, ಜು.28: ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ರಾಜೀನಾಮೆ ನೀಡಿದ ಬಳಿಕ ಪಕ್ಷದ ನಾಯಕತ್ವದ ವಿಷಯದಲ್ಲಿ ಮೂಡಿರುವ ಅಸ್ಪಷ್ಟತೆಯಿಂದ ಪಕ್ಷಕ್ಕೆ ಹಾನಿಯಾಗಿದೆ ಎಂದು ಹಿರಿಯ ಮುಖಂಡ ಶಶಿ ತರೂರ್ ಹೇಳಿದ್ದಾರೆ.

ಇದೀಗ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಜೊತೆಗೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಅಧ್ಯಕ್ಷ ಸೇರಿದಂತೆ ಇತರ ಪ್ರಮುಖ ಹುದ್ದೆಗಳಿಗೂ ಹೊಸದಾಗಿ ಚುನಾವಣೆ ನಡೆದರೆ ನೂತನ  ಮುಖಂಡರ ತಂಡವನ್ನು ಸಮರ್ಥಿಸಿದಂತಾಗುತ್ತದೆ ಎಂದವರು ಹೇಳಿದ್ದಾರೆ. ಈಗಿನ ಪರಿಸ್ಥಿತಿಯಲ್ಲಿ ಪಕ್ಷವನ್ನು ಮುನ್ನಡೆಸಲು ಯುವ ನಾಯಕನೊಬ್ಬನ ಅಗತ್ಯವಿದೆ ಎಂಬ ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಹೇಳಿಕೆಯನ್ನು ಬೆಂಬಲಿಸಿದ ತರೂರ್, ಪಕ್ಷಾಧ್ಯಕ್ಷತೆಗೆ ಚುನಾವಣೆ ನಡೆದಾಗ ಪ್ರಿಯಾಂಕ ಗಾಂಧಿ ವಾದ್ರಾ ಸವಾಲು ಸ್ವೀಕರಿಸುವ ಬಗ್ಗೆ ತಮಗೆ ವಿಶ್ವಾಸವಿದೆ ಎಂದರು.

ಪಕ್ಷದ ಉನ್ನತ ನಾಯಕತ್ವದ ಕುರಿತ ಗೊಂದಲದಿಂದ ಈಗ ಕಾಂಗ್ರೆಸ್ ಎದುರಿಸುತ್ತಿರುವ ಬಿಕ್ಕಟ್ಟು ದೂರಗೊಳಿಸುವ ಕುರಿತು ಸ್ಪಷ್ಟ ಉತ್ತರವಿಲ್ಲ. ಪ್ರಮುಖ ನಿರ್ಧಾರಗಳನ್ನು ಕೈಗೊಂಡು ಪಕ್ಷವನ್ನು ಮುನ್ನಡೆಸುವ ನಾಯಕನ ಕೊರತೆ ಪಕ್ಷದ ಕಾರ್ಯಕರ್ತರನ್ನು ಬಾಧಿಸುತ್ತಿದೆ . ಆದ್ದರಿಂದ ಈ ಪರಿಸ್ಥಿತಿಯ ಬಗ್ಗೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಗಂಭೀರವಾಗಿ ಚಿಂತಿಸಿ, ಇನ್ನಷ್ಟು ವಿಳಂಬಕ್ಕೆ ಅವಕಾಶ ನೀಡದೆ ನಿರ್ಧಾರ ಕೈಗೊಳ್ಳಬೇಕು. ಹಂಗಾಮಿ ಕಾರ್ಯಾಧ್ಯಕ್ಷರನ್ನು ನೇಮಿಸಿ ಕಾರ್ಯಕಾರಿ ಸಮಿತಿಯನ್ನೇ ಬರ್ಖಾಸ್ತುಗೊಳಿಸಿ ಪ್ರಮುಖ ಹುದ್ದೆಗಳಿಗೆ ಹೊಸದಾಗಿ ಚುನಾವಣೆ ನಡೆಸುವುದು ಸೂಕ್ತವಾಗಿದೆ ಎಂದವರು ಅಭಿಪ್ರಾಯಪಟ್ಟಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News