ಝಾಕಿರ್ ನಾಯ್ಕ್ ವಿರುದ್ಧ ರೆಡ್ ಕಾರ್ನರ್ ನೋಟಿಸು ಜಾರಿಗೊಳಿಸಲು ಇಂಟರ್‌ಪೋಲ್ ಮತ್ತೊಮ್ಮೆ ನಿರಾಕರಣೆ

Update: 2019-07-28 17:30 GMT

ಹೊಸದಿಲ್ಲಿ, ಜು. 28: ಧಾರ್ಮಿಕ ವಿದ್ವಾಂಸ ಝಾಕಿರ್ ನಾಯ್ಕ್ ವಿರುದ್ಧ ರೆಡ್ ಕಾರ್ನರ್ ನೋಟಿಸು ಜಾರಿ ಮಾಡಲು ಇಂಟರ್‌ಪೋಲ್ ಮತ್ತೊಮ್ಮೆ ನಿರಾಕರಿಸಿದೆ. ತಪ್ಪೆಸಗಿರುವುದಕ್ಕೆ ಝಾಕಿರ್ ನಾಯ್ಕ್ ವಿರುದ್ಧ ಸಾಕ್ಷಿ ಹಾಗೂ ಪುರಾವೆಗಳ ಕೊರತೆ ಇದೆ ಎಂದು ಇಂಟರ್‌ಪೋಲ್ ಹೇಳಿದೆ. ಇದರಿಂದ ಭಾರತದ ತನಿಖಾ ಸಂಸ್ಥೆಗೆ ಮತ್ತೊಂದು ಹಿನ್ನಡೆ ಆಗಿದೆ. ಇದಲ್ಲದೆ, ತನ್ನ ಕಡತಗಳಲ್ಲಿರುವ ಝಾಕಿರ್ ನಾಯ್ಕ್ ಕುರಿತ ಆರೋಪವನ್ನು ಅಳಿಸಿ ಹಾಕುವಂತೆ ಕೂಡ ಇಂಟರ್‌ಪೋಲ್ ತನ್ನ ಎಲ್ಲ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದೆ. ಝಾಕಿರ್ ನಾಯ್ಕ್ ಇಂಟರ್‌ಪೋಲ್‌ನ ಯಾವುದೇ ರೆಡ್ ಕಾರ್ನರ್ ನೋಟಿಸ್‌ಗೆ ಒಳಪಡುವುದಿಲ್ಲ ಎಂದು ಇಂಟರ್‌ಪೋಲ್ ತನ್ನ ಜುಲೈ 22ರ ದಿನಾಂಕದ ಪತ್ರದಲ್ಲಿ ಹೇಳಿದೆ.

2019 ಜುಲೈ 1ರಿಂದ 5ರ ವರೆಗೆ ಆಯೋಜಿಸಲಾಗಿದ್ದ ತನ್ನ 109ನೇ ಅಧಿವೇಶನದಲ್ಲಿ ಇಂಟರ್‌ಪೋಲ್‌ನ ಆಯೋಗ ಈ ನಿರ್ಧಾರ ತೆಗೆದುಕೊಂಡಿದೆ. ನಂತರ ಇಂಟರ್‌ಪೋಲ್‌ನ ಆಯೋಗದ ಪತ್ರದ ಆದೇಶದಂತೆ 2019 ಜುಲೈ 15ರಂದು ಝಾಕಿರ್ ನಾಯ್ಕ್ ಗೆ ಸಂಬಂಧಿಸಿದ ಎಲ್ಲ ಆರೋಪಗಳನ್ನು ಇಂಟರ್‌ಪೋಲ್‌ನ ಪ್ರಾಧಾನ ಕಾರ್ಯಾಲಯ ಅಳಿಸಿ ಹಾಕಿದೆ. ಇದರಿಂದ ಇಂಟರ್‌ಪೋಲ್‌ನಿಂದ ಝಾಕಿರ್ ನಾಯ್ಕ್ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಲು ನಿರಂತರವಾಗಿ ಪ್ರಯತ್ನಿಸುತ್ತಿರುವ ಭಾರತ ಸರಕಾರಕ್ಕೆ ಹಿನ್ನಡೆ ಉಂಟಾಗಿದೆ.

ಕಳೆದ ವಾರ ಮಹಾರಾಷ್ಟ್ರ ಪೊಲೀಸರು ಮತ್ತೊಮ್ಮೆ, ಐಸಿಸ್‌ನಿಂದ ಪ್ರೇರಿತನಾದ ಯುವಕನೋರ್ವ ಝಾಕಿರ್ ನಾಯ್ಕ್ ಅವರ ಭಾಷಣಗಳ ಪ್ರಭಾವಕ್ಕೆ ಒಳಗಾಗಿದ್ದಾನೆ ಹಾಗೂ ಸ್ಫೋಟಕ, ಶಸ್ತ್ರಾಸ್ತ್ರ ತಯಾರಿಸುವ ತರಬೇತಿ ಪಡೆದುಕೊಂಡಿದ್ದಾನೆ ಎಂದು ಹೇಳಿದ್ದರು. ಆದರೆ, ಆರೋಪ ಪಟ್ಟಿ ಸಲ್ಲಿಸಿದ್ದ ಮಹಾರಾಷ್ಟ್ರ ಪೊಲೀಸ್‌ನ ಭಯೋತ್ಪಾದನೆ ನಿಗ್ರಹ ತಂಡಕ್ಕೆ ಝಾಕಿರ್ ನಾಯ್ಕ್ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸಲು ಸಾಧ್ಯವಾಗಿರಲಿಲ್ಲ. ಭಾರತ ಸರಕಾರ ಝಾಕೀರ್ ನಾಯ್ಕೆ ವಿರುದ್ಧ ಕ್ರಿಮಿನಲ್ ಆರೋಪವನ್ನು ಇಂಟರ್‌ಪೋಲ್‌ಗೆ ಮನವರಿಕೆ ಮಾಡಿ ಕೊಡುವಲ್ಲಿ ವಿಫಲವಾಗುತ್ತಿರುವುದು ಇದು ಮೂರನೇ ಬಾರಿ. 2017ರ ಮಧ್ಯಭಾಗದಲ್ಲಿ ಭಾರತ ಸರಕಾರ ಮೊದಲ ಪ್ರಯತ್ನ ಮಾಡಿತ್ತು. ಝಾಕೀರ್ ನಾಯ್ಕಿ ವಿರುದ್ಧದ ಆರೋಪಗಳಿಗೆ ಸಂಬಂಧಿಸಿ ಭಾರತ ಸರಕಾರ ಹೊಸದಿಲ್ಲಿಯಲ್ಲಿ ಕಳೆದ 12 ತಿಂಗಳಿಂದ ಹಲವು ಸಭೆ ಹಾಗೂ ಪ್ರಸ್ತುತಿಯನ್ನು ಇಂಟರ್‌ಪೋಲ್‌ನೊಂದಿಗೆ ನಡೆಸಿತ್ತು ಎಂದು ಝಾಕಿರ್ ನಾಯ್ಕ್ ಅವರ ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News