ಸೊತ್ತು ಮುಟ್ಟುಗೋಲು ತಡೆ ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಮಲ್ಯ

Update: 2019-07-28 18:54 GMT

ಹೊಸದಿಲ್ಲಿ, ಜು. 28: ತನ್ನ ಹಾಗೂ ಸಂಬಂಧಿಕರ ಮಾಲಕತ್ವದ ಸೊತ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದಕ್ಕೆ ತಡೆ ನೀಡುವಂತೆ ಕೋರಿ ದೇಶದಿಂದ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ರವಿವಾರ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಅಕ್ರಮ ವ್ಯವಹಾರದ ಆರೋಪ ಎದುರಿಸುತ್ತಿರುವ ಕಿಂಗ್‌ಫಿಶರ್‌ಗೆ ಸೇರಿದ ಸೊತ್ತುಗಳನ್ನು ಮಾತ್ರ ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ತಾನು ಬಯಸುವುದಾಗಿ ವಿಜಯ್ ಮಲ್ಯ ಮನವಿಯಲ್ಲಿ ಹೇಳಿದ್ದಾರೆ.

ಸರ್ವೋಚ್ಚ ನ್ಯಾಯಾಲಯ ಈ ಮನವಿಯ ವಿಚಾರಣೆಯನ್ನು ಜುಲೈ 29ಕ್ಕೆ ನಿಗದಿಪಡಿಸಿದೆ. ವಿವಿಧ ಬ್ಯಾಂಕ್‌ಗಳಿಗೆ 8000 ಕೋ. ರೂ.ಗೂ ಅಧಿಕ ಸಾಲದ ಮೊತ್ತ ಮರು ಪಾವತಿಸುವಲ್ಲಿ ವಿಫಲವಾಗಿರುವ ಹಿನ್ನೆಲೆಯಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ ನೇತೃತ್ವದ ಬ್ಯಾಂಕ್‌ಗಳ ಒಕ್ಕೂಟ ವಿಜಯ್ ಮಲ್ಯ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ 2016ರಲ್ಲಿ ದೂರು ಸಲ್ಲಿಸಿತ್ತು. 15ಕ್ಕೂ ಅಧಿಕ ಬ್ಯಾಂಕ್‌ಗಳಿಗೆ ಸಾಲ ಮರು ಪಾವತಿಸುವಲ್ಲಿ ಮಲ್ಯ ವಿಫಲರಾಗಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಬ್ಯಾಂಕ್‌ಗಳ ಒಕ್ಕೂಟ ಮಲ್ಯ ಭಾರತಕ್ಕೆ ಬರಲು ಹಾಗೂ ಸಾಲ ಮರು ಪಾವತಿಸಲು ನಿರ್ದೇಶಿಸುವಂತೆ ಸರ್ವೋಚ್ಚ ನ್ಯಾಯಾಲಯದಲ್ಲಿ ಮನವಿ ಮಾಡಿತ್ತು. ಸರಕಾರದ ಏಜೆನ್ಸಿಗಳು ಸೊತ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆಗೆ ತಡೆ ವಿಧಿಸುವಂತೆ ಕೋರಿ ಮಲ್ಯ ಈ ಹಿಂದೆ ಸಲ್ಲಿಸಿದ್ದ ಮನವಿಯನ್ನು ಬಾಂಬೆ ಉಚ್ಚ ನ್ಯಾಯಾಲಯ ಜುಲೈ 11ರಂದು ತಿರಸ್ಕರಿಸಿತ್ತು. ವಿಜಯ್ ಮಲ್ಯ 2016 ಮಾರ್ಚ್‌ನಲ್ಲಿ ಭಾರತ ತ್ಯಜಿಸಿದ್ದರು. ಅವರು ಈಗ ಇಂಗ್ಲೆಂಡ್‌ನಲ್ಲಿ ವಾಸಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News