ಪ್ರಧಾನಿ ಮೋದಿ, ಜಾವಡೇಕರ್‌ಗೆ ಹುಲಿಗಳ ಬಹಿರಂಗ ಪತ್ರ!

Update: 2019-07-29 04:13 GMT

ಹೊಸದಿಲ್ಲಿ, ಜು.29: ಚಿತ್ರ ನಿರ್ಮಾಪಕರು, ನಟರು, ಇತಿಹಾಸಕಾರರು ಹಾಗೂ ಮತ್ತಿತರರು ಪ್ರಧಾನಿ ನರೇಂದ್ರ ಮೋದಿಯವರಿಗೆ ಬಹಿರಂಗ ಪತ್ರ ಬರೆದ ಬೆನ್ನಲ್ಲೇ, ದೇಶದ 2,600ಕ್ಕೂ ಹೆಚ್ಚು ಹುಲಿಗಳು, "ಕಾಡು ಉಳಿಸಿ- ಹುಲಿ ಉಳಿಸಿ" ಎಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಪರಿಸರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಅವರಿಗೆ ಬಹಿರಂಗಪತ್ರ ಬರೆದಿವೆ.

ಇಬ್ಬರೂ ಮುಖಂಡರಿಗೆ ವಿಶ್ವ ಹುಲಿ ದಿನಾಚರಣೆಯ ಶುಭಾಶಯ ಹೇಳುವ ಮೂಲಕ ಪತ್ರ ಆರಂಭಿಸಿದ್ದು, "ನಮ್ಮ ಗಣತಿ ಸಂಖ್ಯೆಯನ್ನು ಪ್ರಕಟಿಸಿದಾಗಲೆಲ್ಲ, ವಿಶ್ವದಲ್ಲೇ ಅತಿ ಹೆಚ್ಚು ಹುಲಿಗಳು ಇರುವ ದೇಶ ಎಂಬ ಹೆಮ್ಮೆಯ ಪರಂಪರೆಗೆ ದೇಶ ಪಾತ್ರವಾಗುತ್ತಿದೆ. ನಮ್ಮ ವರ್ಗರಹಿತ ಸಮಾಜದಲ್ಲಿ ನಾವು ಗಣನೀಯವಾಗಿ ಪ್ರಗತಿ ಸಾಧಿಸಿದ್ದು ರೋಮಾಂಚನ ತಂದಿದೆ"

"ಇದು ಇಡೀ ದೇಶ ಸಂಭ್ರಮಿಸುವ ವಿಚಾರ; ಇದು ಟಾಂಟಾಂ ಹೊಡೆಯಬಹುದಾದ ಸಾಧನೆ. ಆದರೆ ನಿಮ್ಮ ಸಹ ಮಾನವರು ನಮ್ಮನ್ನು ನಡೆಸಿಕೊಳ್ಳುತ್ತಿರುವ ರೀತಿ ಮಾತ್ರ ಅಮಾನವೀಯ" ಎಂದು ಬಣ್ಣಿಸಲಾಗಿದೆ.

"ಕಳೆದ ವಾರವಷ್ಟೇ ದೇಶದ ಎರಡು ಭಾಗಗಳಿಂದ ಭಯಾನಕ ಸುದ್ದಿ ಬಂದಿದೆ. ಫಿಲಿಬಿಟ್‌ನಲ್ಲಿ ನಮ್ಮಲ್ಲೊಬ್ಬರು ನಿರ್ದಯವಾಗಿ ಹತ್ಯೆಯಾಗಿದ್ದಾರೆ. ಬಂಡೀಪುರದಲ್ಲಿ ಹಿರಿಯ ಹುಲಿಯೊಂದು ಹಿಟ್ ಆ್ಯಂಡ್ ರನ್‌ಗೆ ಬಲಿಯಾಗಿದೆ. ಕೆಲ ವಾರಗಳ ಹಿಂದಷ್ಟೇ, ಕೇಂದ್ರ ಭಾರತದ ಪೆಂಚ್ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿಯುದ್ದಕ್ಕು ಓಡಾಡಿ ಕೊನೆಗೂ ತನ್ನ ಕಥೆ ಹೇಳಲು ಬದುಕಿ ಉಳಿದಿದೆ"

"ಕೇವಲ ಮನುಷ್ಯಭಾಷೆಯಲ್ಲಿ ಸಂವಾದ ನಡೆಸಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ನಮ್ಮನ್ನು ಭಯಾನಕವಾಗಿ ನಡೆಸಿಕೊಳ್ಳಲಾಗುತ್ತಿದೆ. ನಮ್ಮಲ್ಲೂ ಭಯಾನಕರು ಇದ್ದಾರೆ. ಅವರ ನಡತೆಯನ್ನು ತಿದ್ದಲು ಪ್ರಯತ್ನಿಸುತ್ತಿದ್ದೇವೆ. ಆದಾಗ್ಯೂ ಈ ಘಟನೆಗಳು ನಿಮ್ಮ ವರ್ಗ ಸಮಾಜದ ಲಕ್ಷಣಗಳು ಎಂಬ ಭಾವನೆ ನಮ್ಮಲ್ಲಿ ದಟ್ಟವಾಗಿ ಬೆಳೆಯುತ್ತಿವೆ" ಎಂದು ವಿವರಿಸಲಾಗಿದೆ.

"ನಮಗೆ ಮನುಷ್ಯರ ಬಗ್ಗೆ ಕೆಟ್ಟ ಭಾವನೆಯೇನೂ ಇಲ್ಲ; ಶತಮಾನಗಳಿಂದ ನಾವು ಸಹಬಾಳ್ವೆ ನಡೆಸಿಕೊಂಡು ಬಂದಿದ್ದೇವೆ. ಅಯ್ಯಪ್ಪ ಹಾಗೂ ದುರ್ಗೆಯ ವಾಹನವಾಗಿ ನಮ್ಮ ಪೂರ್ವಜನರನ್ನು ನೀವು ಪೂಜಿಸುತ್ತಿದ್ದ ನಿದರ್ಶನಗಳಿವೆ. ಆದರೆ ಇಂದು ನಾವು ನಿಮ್ಮ ಮರ್ಜಿಯಲ್ಲಿದ್ದೇವೆ ಎಂದು ಕೈಮುಗಿದು ಹೇಳುವ ಪರಿಸ್ಥಿತಿ ನಿರ್ಮಾಣವಾಗಿದೆ"

"ನಮ್ಮ ವಾಸತಾಣಗಳ ಮೂಲಕ ಹಾದುಹೋಗಿರುವ ರಸ್ತೆಗಳನ್ನು ದಾಟುವ ವೇಳೆ ನಮ್ಮ ಕುಟುಂಬದ ಕೆಲವರು ಬೇರ್ಪಡುತ್ತಿದ್ದಾರೆ. ಆಹಾರ ಹಾಗೂ ನೀರಿಗಾಗಿ ನಾವು ಕಾಡಿನಿಂದ ಹೊರಗೆ ಬರುವುದು ಅನಿವಾರ್ಯವಾಗಿದೆ. ಮನುಷ್ಯರು ವಾಸಿಸುವ ಪ್ರದೇಶದಲ್ಲಿ ಮೂರು ಕಿಲೋಮೀಟರ್ ಒಳಗೆವರೆಗೂ ಬರುವುದು ಹಾನಿ ಮಾಡುವ ಉದ್ದೇಶದಿಂದಲ್ಲ. ಹಸಿರಿಗಾಗಿ ಕೃಷಿ ಬೇಲಿ ದಾಟುವಾಗ ವಿದ್ಯುತ್ ಸ್ಪರ್ಶದ ಭಯ ಕಾಡುತ್ತಿದೆ. ಇನ್ನೂ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ"

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News