×
Ad

ಎನ್‌ಎಂಸಿ ಮಸೂದೆ ವಿರುದ್ಧ ಬುಧವಾರ ರಾಷ್ಟ್ರಾದ್ಯಂತ ವೈದ್ಯರ ಪ್ರತಿಭಟನೆ

Update: 2019-07-30 20:45 IST

ಹೊಸದಿಲ್ಲಿ, ಜು.30: ರಾಷ್ಟ್ರೀಯ ವೈದ್ಯಕೀಯ ಆಯೋಗ(ಎನ್‌ಎಂಸಿ) ಮಸೂದೆಯ ನ್ನು ವಿರೋಧಿಸಿ ಬುಧವಾರ (ಜುಲೈ 31ರಂದು) ದೇಶದಾದ್ಯಂತ ವೈದ್ಯರು ಪ್ರತಿಭಟನೆ ನಡೆಸಲಿದ್ದಾರೆ ಎಂದು ಭಾರತೀಯ ವೈದ್ಯಕೀಯ ಸಂಘ(ಐಎಂಎ)ದ ಹೇಳಿಕೆ ತಿಳಿಸಿದೆ.

ಬುಧವಾರ ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಸರಕಾರಿ ಆಸ್ಪತ್ರೆಗಳ ಒಪಿಡಿ ವಿಭಾಗ ಕಾರ್ಯನಿರ್ವಹಿಸುವುದಿಲ್ಲ. ಎಲ್ಲಾ ರಾಜ್ಯಗಳಲ್ಲಿ ಪ್ರತಿಭಟನೆ ಹಾಗೂ ಉಪವಾಸ ಸತ್ಯಾಗ್ರಹ ನಡೆಯಲಿದೆ. ತರಗತಿ ಬಹಿಷ್ಕರಿಸುವಂತೆ ವೈದ್ಯಕೀಯ ವಿದ್ಯಾರ್ಥಿಗಳಿಗೆ ಕರೆ ನೀಡಿದ್ದೇವೆ ಎಂದು ಐಎಂಎ ಹೇಳಿಕೆ ತಿಳಿಸಿದೆ. ಲೋಕಸಭೆಯಲ್ಲಿ ಸೋಮವಾರ ಅಂಗೀಕಾರವಾಗಿರುವ ಎನ್‌ಎಂಸಿ ಮಸೂದೆಯನ್ನು ವಿರೋಧಿಸಿ ಅಗತ್ಯವಲ್ಲದ ಸೇವೆ(ನಾನ್ ಅಸೆನ್ಷಿಯಲ್ ಸರ್ವಿಸ್) ಬುಧವಾರ ಸ್ಥಗಿತಗೊಳ್ಳಲಿದೆ ಎಂದು ಐಎಂಎ ತಿಳಿಸಿದೆ. ತುರ್ತು ಸೇವೆ, ಅಪಘಾತ ಚಿಕಿತ್ಸಾ ವಿಭಾಗ, ತೀವ್ರ ನಿಗಾ ಘಟಕ ಹಾಗೂ ಸಂಬಂಧಿತ ವಿಭಾಗಗಳು ಎಂದಿನಂತೆ ಕಾರ್ಯನಿರ್ವಹಿಸಲಿದೆ.

ಕರಿಪಟ್ಟಿ ಧರಿಸಿ ಪ್ರತಿಭಟನೆ ನಡೆಸುವಂತೆ ಸ್ಥಾನಿಕ ವೈದ್ಯರ ಸಂಘದ ಒಕ್ಕೂಟ ಮತ್ತು ಸ್ಥಾನಿಕ ವೈದ್ಯರ ಸಂಘ ಕರೆ ನೀಡಿದೆ. ಎನ್‌ಎಂಸಿ ಮಸೂದೆಯ 32ನೇ ಪರಿಚ್ಛೇದದಂತೆ, 3.5 ಲಕ್ಷ ಸಂಖ್ಯೆಯಲ್ಲಿರುವ ಅನಧಿಕೃತ ವ್ಯಕ್ತಿಗಳು ಲೈಸೆನ್ಸ್ ಪಡೆದರೆ ಆಧುನಿಕ ವೈದ್ಯಪದ್ಧತಿಯ ಚಿಕಿತ್ಸೆ ನೀಡಬಹುದಾಗಿದೆ. ಇದರಿಂದ ಔಷಧ ವ್ಯಾಪಾರಿ, ನರ್ಸ್‌ಗಳು, ಫಿಸಿಯೋಥೆರಪಿಸ್ಟ್, ನೇತ್ರ ತಪಾಸಣೆ ಮಾಡುವವರು ಎಲ್ಲರೂ ಆಧುನಿಕ ವೈದ್ಯಪದ್ಧತಿಯ ಚಿಕಿತ್ಸೆ ನೀಡಲು ಅರ್ಹರಾಗುತ್ತಾರೆ. ಅಳಲೆಕಾಯಿ ಪಂಡಿತರನ್ನು ವೈದ್ಯರನ್ನಾಗಿಸುವ ಈ ಮಸೂದೆಯನ್ನು ತಿದ್ದುಪಡಿ ಮಾಡದಿದ್ದರೆ ವೈದ್ಯಕೀಯ ಶಿಕ್ಷಣದ ಗುಣಮಟ್ಟ ಹದಗೆಡುತ್ತದೆ ಎಂದು ಐಎಂಎ ಪ್ರಧಾನ ಕಾರ್ಯದರ್ಶಿ ಆರ್‌ವಿ ಅಶೋಕನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News