×
Ad

ಉನ್ನಾವೋ ಸಂತ್ರಸ್ತೆಯ ಪತ್ರ ನನಗೆ ತಲುಪಿರಲಿಲ್ಲ: ಸಿಜೆಐ ಗೊಗೊಯಿ

Update: 2019-07-31 16:04 IST

ಹೊಸದಿಲ್ಲಿ, ಜು.31:  ತನ್ನ ಜೀವಕ್ಕೆ ಬೆದರಿಕೆಯಿದೆಯೆಂದು ದೂರಿ ಉನ್ನಾವೋ ಅತ್ಯಾಚಾರ ಸಂತ್ರಸ್ತೆ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳಿಗೆ ಬರೆದ ಪತ್ರವನ್ನು ನ್ಯಾಯಾಲಯ ಬುಧವಾರ  ಗಣನೆಗೆ ತೆಗೆದುಕೊಂಡಿದೆ. ಈ ಕುರಿತಂತೆ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಪೀಠ  ನಾಳೆ ವಿಚಾರಣೆ  ಕೈಗೆತ್ತಿಕೊಳ್ಳಲಿದೆ.

ಜತೆಗೆ ಸಂತ್ರಸ್ತೆ ಮುಖ್ಯ ನ್ಯಾಯಮೂರ್ತಿಗಳಿಗೆ ಬರೆದ ಈ ಪತ್ರವನ್ನು ಅವರ ಮುಂದೆ ಪ್ರಸ್ತುತ ಪಡಿಸಲು ಆದ ವಿಳಂಬದ ಕುರಿತಂತೆ ಸುಪ್ರೀಂ ಕೋರ್ಟ್ ರಿಜಿಸ್ಟ್ರಿಯ ವರದಿಯನ್ನೂ ನ್ಯಾಯಾಲಯ ಗುರುವಾರ ಪರಿಶೀಲಿಸಲಿದೆ.

“ಆ ಪತ್ರವನ್ನು  ನನ್ನ ಮುಂದೆ ಇರಿಸಲಾಗಿರಲಿಲ್ಲ, ಸಿಜೆಐ ಅವರು ಕ್ರಮ ಕೈಗೊಂಡಿಲ್ಲ ಎಂದು ಮಾಧ್ಯಮಗಳು ದೂರಿವೆ'' ಎಂದು ಜಸ್ಟಿಸ್ ಗೊಗೊಯಿ ಹೇಳಿದ್ದಾರೆ.

ಅತ್ಯಾಚಾರ ಸಂಬಂಧ ದಾಖಲಿಸಿದ್ದ ದೂರನ್ನು ವಾಪಸ್ ಪಡೆಯುವಂತೆ ಕೆಲವರು ಒತ್ತಾಯಿಸಿ ಬೆದರಿಕೆಯೊಡ್ಡಿದ್ದಾರೆ ಎಂದು ಸಂತ್ರಸ್ತೆ ಈ ಪತ್ರದಲ್ಲಿ ಆರೋಪಿಸಿದ್ದಾಳೆ. “ಅವರು ಹೇಳಿದಂತೆ ಕೇಳದೇ ಇದ್ದರೆ ಇಡೀ ಕುಟುಂಬವನ್ನೇ  ಜೈಲಿಗೆ ತಳ್ಳುವುದಾಗಿಯೂ ಹೇಳಿದ್ದಾರೆ'' ಎಂದು ಜುಲೈ 12ರಂದು ಬರೆದ ಪತ್ರದಲ್ಲಿ ಆಕೆ ಆರೋಪಿಸಿದ್ದಾಳೆ.

ಆದರೆ ಆ ಪತ್ರವನ್ನು ಸಿಜೆಐ ಗಮನಿಸುವ ಮೊದಲೇ ಆಕೆ ಹಾಗೂ ಆಕೆಯ ವಕೀಲರು ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದಾರಲ್ಲದೆ, ಇಬ್ಬರು ಸಂಬಂಧಿ ಮಹಿಳೆಯರು ಮೃತಪಟ್ಟಿದ್ದಾರೆ. ಈ ಅಪಘಾತಕ್ಕೆ ಆರೋಪಿ ಶಾಸಕನೇ ಕಾರಣ ಎಂದು ಆಕೆಯ ಕುಟುಂಬ ಆರೋಪಿಸಿರುವ ಹಿನ್ನೆಲೆಯಲ್ಲಿ ಇದೀಗ ಸಿಬಿಐ ಅಪಘಾತ ಪ್ರಕರಣದ ತನಿಖೆ ನಡೆಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News