ಸೌದಿಯಲ್ಲಿ ಕುಳಿತು ಸಾಮಾಜಿಕ ಜಾಲತಾಣದಲ್ಲಿ ಹಲವರ ತೇಜೋವಧೆ, ಕೋಮುಗಲಭೆಗೆ ಹುನ್ನಾರ: ಆರೋಪ

Update: 2019-07-31 15:29 GMT

ಮಂಗಳೂರು, ಜು.31: ಸೌದಿ ಅರೇಬಿಯಾದಲ್ಲಿ ಕುಳಿತು ಕೆಲ ದುಷ್ಕರ್ಮಿಗಳು ಹಲವರ ತೇಜೋವಧೆ ನಡೆಸುತ್ತಿರುವುದು ಮಾತ್ರವಲ್ಲದೆ, ಹಿಂದೂ-ಮುಸ್ಲಿಮರ ನಡುವೆ ದ್ವೇಷ ಬಿತ್ತಿ ಕೋಮುಗಲಭೆಗೆ ಹುನ್ನಾರ ನಡೆಸುತ್ತಿದ್ದಾರೆ ಎಂದು ರಿಯಾಝ್, ಮುಹಮ್ಮದ್, ಅಬ್ದುಲ್ ಲತೀಫ್ ಮತ್ತು ಗಿರೀಶ್ ಶೆಟ್ಟಿ ಎಂಬವರು ಆರೋಪಿಸಿದ್ದಾರೆ.

ನಗರದ ಖಾಸಗಿ ಹೊಟೇಲಿನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಅಡ್ಯಾರ್ ಕಣ್ಣೂರಿನ ಕುಂಡಾಲ ನಿವಾಸಿ ರಿಯಾಝ್ ಮಾತನಾಡಿ, “ಮುಹಮ್ಮದ್ ಪಣಕಜೆ, ಬೆಳ್ತಂಗಡಿಯ ಆದಂ, ಚೊಕ್ಕಬೆಟ್ಟುವಿನ ಝುಬೈರ್ ಸಲಫಿ ಮತ್ತು ಕುಳಾಯಿಯ ಅಬ್ದುಲ್ ವಹಾಬ್ ಎಂಬವರು ಸಾಮಾಜಿಕ ಜಾಲತಾಣದಲ್ಲಿ ಹಲವರ ವೈಯಕ್ತಿಕ ನಿಂದನೆಗೈಯುತ್ತಿದ್ದಾರೆ ಎಂದು ಆರೋಪಿಸಿದರು.

“ಇಷ್ಟೇ ಅಲ್ಲದೆ ದ್ವೇಷ ಬಿತ್ತಿ ಹಿಂದು-ಮುಸ್ಲಿಮ್ ಸಮುದಾಯಗಳ ಮಧ್ಯೆ ಸಂಘರ್ಷಕ್ಕೆ ಎಡೆಮಾಡಿಕೊಟ್ಟು ಜಿಲ್ಲೆಯಲ್ಲಿ ಅಶಾಂತಿಗೆ ಯತ್ನಿಸುತ್ತಿದ್ದಾರೆ. ಸೌದಿಯಲ್ಲಿರುವ ಮುಹಮ್ಮದ್ ಪಣಕಜೆ ಕೆಲವು ತಿಂಗಳಿನಿಂದ ಹಿಂದೂ ಮುಖಂಡರು, ವಿವಿಧ ಧರ್ಮಗಳ ದೇವರನ್ನು ಹೀಯಾಳಿಸಿ, ವಿಕೃತಗೊಳಿಸಿ, ಅಶ್ಲೀಲವಾಗಿ ಚಿತ್ರಿಸಿ ಜಿಲ್ಲೆಯಲ್ಲಿ ಅಶಾಂತಿ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾನೆ. ನನ್ನ ಸಹೋದರಿ ಮತ್ತವರ ಪತಿ ಸರ್ಫಾಕ್ 4 ವರ್ಷಗಳ ಹಿಂದೆ ಕುವೈತ್ ನಲ್ಲಿರುವಾಗ ಸತ್ಯನಾರಾಯಣ ಪೂಜೆಗೆ ಸಹಕರಿಸಿದ್ದಾರೆ ಎಂದು ಆರೋಪಿಸಿ ಸರ್ಫಾಕ್ ‌ರನ್ನು ಸಾಮಾಜಿಕ ಜಾಲತಾಣದಲ್ಲಿ ಮಾನಹಾನಿಗೈದಿದ್ದ. ಸರ್ಫಾಕ್‌ ಫೋಟೋವನ್ನು ವಿಕೃತಗೊಳಿಸಿದ್ದ. ಅಲ್ಲದೆ ಮುಹಮ್ಮದ್ ಪಣಕಜೆಯೇ ಸ್ವತಃ ತನ್ನ ಮತ್ತು ತನ್ನ ಪುತ್ರನ ಫೋಟೋವನ್ನು ವಿಕೃತಗೊಳಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು ಅದನ್ನು ಸರ್ಫಾಕ್‌ ತಲೆಗೆ ಕಟ್ಟಿದ್ದ. ಈ ಕೃತ್ಯಕ್ಕೆ ಆದಮ್, ಝುಬೈರ್, ವಹಾಬ್ ಎಂಬವರು ಕೂಡ ಬೆಂಬಲ ನೀಡಿದ್ದರು” ಎಂದು ರಿಯಾಝ್ ಆರೋಪಿಸಿದ್ದು, ಶೀಘ್ರ ಪೊಲೀಸ್ ಇಲಾಖೆಯು ತಪ್ಪಿತಸ್ಥರನ್ನು ಬಂಧಿಸಿ ಸೂಕ್ತ ಕ್ರಮ ಜರಗಿಸಬೇಕು ಎಂದು ಆಗ್ರಹಿಸಿದ್ದಾರೆ.

“ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಇವರು ಹಿಂದೂ, ಕ್ರೈಸ್ತರ ದೇವರು, ದೇವತೆಯರು, ಧಾರ್ಮಿಕ ವಿದ್ವಾಂಸರು, ಪುಣ್ಯಸ್ಥಳಗಳ ಚಿತ್ರಗಳನ್ನು ವಿಕೃತಗೊಳಿಸಿ ಕೋಮುಗಲಭೆ ಸೃಷ್ಟಿಸಲು ಹವಣಿಸುತ್ತಿದ್ದರು. ಇವರ ಹುನ್ನಾರದ ವಿರುದ್ಧ ಪ್ರತಿಕ್ರಿಯಿಸುವವರ ಕುಟುಂಬಸ್ಥರ ಫೋಟೋವನ್ನು ಸಾಮಾಜಿಕ ಜಾಲತಾಣಗಳಿಂದ ಪಡೆದು ಅವುಗಳನ್ನು ವಿಕೃತಗೊಳಿಸುವುದು, ಅಶ್ಲೀಲವಾಗಿ ಬರೆಯುವುದು, ಫೋನ್ ಮಾಡಿ ಕೊಲೆ ಬೆದರಿಕೆ ಹಾಕುವುದು, ನಕಲಿ ಖಾತೆ ಸೃಷ್ಟಿಸಿ ಗೊಂದಲ ಸೃಷ್ಟಿಸುವುದು ಇತ್ಯಾದಿಗಳನ್ನು ಮಾಡುತ್ತಿದ್ದರು. ಇವರ ಮೇಲೆ ಈಗಾಗಲೆ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದರೂ ಕೂಡ ಪೊಲೀಸರು ಇನ್ನೂ ಆರೋಪಿಗಳನ್ನು ಬಂಧಿಸಿಲ್ಲ. ಹಾಗಾಗಿ ಪೊಲೀಸ್ ಇಲಾಖೆಯು ಇದನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಬಂಧಿಸಿ ಕಾನೂನು ಕ್ರಮ ಜರಗಿಸಬೇಕು. ಸಾಮಾಜಿಕ ಜಾಲತಾಣಗಳ ದುರುಪಯೋಗಕ್ಕೆ ಕಡಿವಾಣ ಹಾಕಬೇಕು” ಎಂದು ರಿಯಾಝ್ ಆಗ್ರಹಿಸಿದರು.

ಈಗಾಗಲೆ ತನ್ನ ತಂಗಿ ಮತ್ತು ಬಾವ ಸರ್ಫಾಕ್‌ ಗೆ ಆದ ಅನ್ಯಾಯದ ವಿರುದ್ಧ ಸೈಬರ್ ಕ್ರೈಂ ಠಾಣೆಗೆ, ಮಂಗಳೂರು ಗ್ರಾಮಾಂತರ ಠಾಣೆಗೆ ದೂರು ನೀಡಲಾಗಿದೆ. ನ್ಯಾಯಾಲಯಕ್ಕೂ ಖಾಸಗಿ ದೂರು ನೀಡಲಾಗುವುದು ಎಂದು ರಿಯಾಝ್ ತಿಳಿಸಿದರು.

ಉಜಿರೆಯ ಮುಹಮ್ಮದ್ ಎಂಬವರು ಮಾತನಾಡಿ, “ನಾನು ಕಳೆದ 24 ವರ್ಷಗಳಿಂದ ಗಲ್ಫ್ ‌ನಲ್ಲಿ ಸರಕಾರಿ ಉದ್ಯೋಗದಲ್ಲಿದ್ದೆ. ನನ್ನ ಪತ್ನಿ ಕೂಡ ಗಲ್ಫ್‌ನಲ್ಲಿ ಉದ್ಯೋಗದಲ್ಲಿದ್ದರು. ನಮ್ಮ ವೇತನದಿಂದ ನಾವು ಪರಿಚಯದ ಅರ್ಹರಿಗೆ ಆರ್ಥಿಕ ನೆರವು ನೀಡುತ್ತಿದ್ದೆವು. ಆದರೆ, ಈ ದುಷ್ಕರ್ಮಿಗಳು ನಮ್ಮ ವಿರುದ್ಧವೂ ತೇಜೋವಧೆ ನಡೆಸಿದರು. ಸ್ವತಃ ಅವರೇ ನಕಲಿ ಖಾತೆ ತೆರೆದು ಏನೋನೋ ಬರೆದುಬಿಟ್ಟರು. ಇದರಿಂದ ನಾವು ಸರಕಾರಿ ಉದ್ಯೋಗ ಕಳೆದುಕೊಂಡೆವು. ನಮಗೆ ಬರಬೇಕಾಗಿದ್ದ ಸುಮಾರು 47 ಲಕ್ಷ ರೂ. ಕೂಡ ಖೋತಾ ಆಯಿತು. ಇದೀಗ ಕುಟುಂಬ ಸಮೇತ ಊರಿಗೆ ಮರಳಿದ್ದೇವೆ. ಎಲ್ಲಕ್ಕಿಂತ ಮುಖ್ಯವಾಗಿ ನನ್ನ ಮಕ್ಕಳ ಶಿಕ್ಷಣಕ್ಕೆ ಹೊಡೆತ ಬಿದ್ದಿದೆ. ಟಿಸಿ ಇಲ್ಲದ ಕಾರಣ ಯಾವ ಶಿಕ್ಷಣ ಸಂಸ್ಥೆಗಳೂ ನಮ್ಮ ಮಕ್ಕಳಿಗೆ ಪ್ರವೇಶ ಕೊಡಲು ಒಪ್ಪುತ್ತಿಲ್ಲ. ಈ ವಿಕೃತರು ಎಸಗಿದ ಕೃತ್ಯದಿಂದ ನಾವು ಕಂಗಾಲಾಗಿದ್ದೇವೆ. ಹಾಗಾಗಿ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು” ಎಂದು ಒತ್ತಾಯಿಸಿದರು.

ಮೂಡುಬಿದಿರೆಯ ಅಬ್ದುಲ್ಲತೀಫ್ ಮಾತನಾಡಿ, “ಸುಳ್ಯ ಮೂಲದ ಇಬ್ರಾಹೀಂ ಖಲೀಲ್ ಎಂಬಾತ ಕೂಡ ಹೀಗೆ ನಕಲಿ ಖಾತೆ ತೆರೆದು ನನ್ನ ಸಹಿತ ಹಲವರ ತೇಜೋವಧೆ ಮಾಡಿದ್ದಾನೆ. ಆತನ ವಿರುದ್ಧವೂ ಕ್ರಮ ಜರುಗಿಸಬೇಕು” ಎಂದು ಆಗ್ರಹಿಸಿದರು.

ಜೆಪ್ಪುವಿನ ಗಿರೀಶ್ ಗಟ್ಟಿ ಎಂಬವರು ಮಾತನಾಡಿ, “ನಾನು ಯಾವತ್ತೂ ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಫೇಸ್‌ ಬುಕ್‌ ನಲ್ಲಿ ಬರೆದ ಪ್ರತಿಕ್ರಿಯೆಗೆ ಸಂಬಂಧಿಸಿ ನನ್ನ ತೇಜೋವಧೆ ಮಾಡಿದ್ದಾರೆ. ರಾತ್ರೋರಾತ್ರಿ ಫೋನ್ ಕರೆ ಮಾಡಿ ಬೆದರಿಸಿದ್ದಾರೆ. ಇದರಿಂದ ನೊಂದು ಎರಡು ಬಾರಿ ಆತ್ಮಹತ್ಯೆಗೂ ಯತ್ನಿಸಿದ್ದೆ. ಪೊಲೀಸ್ ಇಲಾಖೆಯು ಇಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು” ಎಂದು ಆಗ್ರಹಿಸಿದರು.

ಕುವೈತ್ ‌ನಲ್ಲಿರುವ ಪತಿ ಸರ್ಫಾಕ್ ರನ್ನು ಸೌದಿ ಅರೇಬಿಯಾದಲ್ಲಿರುವ ಮುಹಮ್ಮದ್ ಪಣಕಜೆ, ಬೆಳ್ತಂಗಡಿಯ ಆದಂ, ಚೊಕ್ಕಬೆಟ್ಟುವಿನ ಝುಬೈರ್ ಸಲಫಿ, ಕುಳಾಯಿಯ ಅಬ್ದುಲ್ ವಹಾಬ್ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಚಿತ್ರಿಸಿದ್ದಾರೆ ಎಂದು ಆರೋಪಿಸಿ ಈಗಾಗಲೇ ಸರ್ಫಾಕ್‌ ಪತ್ನಿ ಮಂಗಳೂರಿನ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News