ಮಂಗಳೂರು : ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ ; ಅಪಾಯದಿಂದ ಚಾಲಕ ಪಾರು
Update: 2019-07-31 18:03 IST
ಮಂಗಳೂರು: ಕೊಡಿಯಾಲ್ ಬೈಲು ಪ್ರದೇಶದ ಜೈಲು ರಸ್ತೆಯ ಸಮೀಪ ಚಲಿಸುತ್ತಿದ್ದ ಕಾರೊಂದರಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ಬುಧವಾರದಂದು ನಡೆದಿದೆ.
ಕಾರು ರಸ್ತೆಯಲ್ಲಿ ಸಂಚರಿಸುತ್ತಿದ್ದ ಸಂದರ್ಭದಲ್ಲೇ ಅದರ ಇಂಜಿನ್ ಭಾಗದಲ್ಲಿ ಬೆಂಕಿಯ ಕಿಡಿ ಕಾಣಿಸಿಕೊಂಡಿದೆ. ಕಿಡಿ ಮತ್ತು ಹೊಗೆ ಕಾಣಿಸಿಕೊಂಡ ತಕ್ಷಣ ಕಾರನ್ನು ಚಲಾಯಿಸುತ್ತಿದ್ದ ಅದರ ಮಾಲಕ ವಿಕ್ರಂ ಅವರು ತಕ್ಷಣವೇ ಕಾರನ್ನು ರಸ್ತೆ ಬದಿಗೆ ನಿಲ್ಲಿಸಿ ಕಾರಿನಿಂದ ಇಳಿದಿದ್ದಾರೆ. ಇದರಿಂದಾಗಿ ಸಂಭವಿಸಬಹುದಾಗಿದ್ದ ಅಪಾಯವೊಂದು ತಪ್ಪಿದೆ. ಬಳಿಕ ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿ ಕಾರಿಗೆ ವ್ಯಾಪಿಸುತ್ತಿದ್ದ ಬೆಂಕಿಯನ್ನು ನಂದಿಸಿದರು.
ಕಾರಿನ ಎ.ಸಿ.ಯನ್ನು ದುರಸ್ತಿಪಡಿಸಿ ತರುತ್ತಿದ್ದ ಸಂದರ್ಭ ಈ ಘಟನೆ ನಡೆದಿದೆ ಎಂಬುದಾಗಿ ಕಾರಿನ ಮಾಲಕ ವಿಕ್ರಂ ತಿಳಿಸಿದ್ದಾರೆ.