×
Ad

ಮಂಗಳೂರು: ಆ.1ರಿಂದ ಸಾಂಪ್ರದಾಯಿಕ ಮೀನುಗಾರಿಕೆ ಆರಂಭ

Update: 2019-07-31 19:36 IST

ಮಂಗಳೂರು, ಜು. 31: ಕಳೆದ ಎರಡು ತಿಂಗಳ ಕಾಲ ನಿಷೇಧಕ್ಕೊಳಗಾಗಿದ್ದ ಯಾಂತ್ರೀಕೃತ ಮೀನುಗಾರಿಕೆಯು ಆ.1ರಂದು ಮತ್ತೆ ಆರಂಭಗೊಳ್ಳಲಿದೆ. ಈಗಾಗಲೆ ಮೀನುಗಾರರು ಬಲೆ, ಮಂಜುಗೆಡ್ಡೆ, ಆಹಾರ ವಸ್ತು ಸಹಿತ ಪೂರಕ ಪರಿಕಗಳು ಹಾಗೂ ಶುಭ ನಿರೀಕ್ಷೆಯೊಂದಿಗೆ ಮೀನುಗಾರರು ಕಡಲಿಗೆ ಇಳಿಯಲು ತಯಾರಿ ನಡೆಸಿದ್ದಾರೆ.

ದ.ಕ.ಜಿಲ್ಲೆಯಲ್ಲಿ ಸುಮಾರು 850 ಆಳ ಸಮುದ್ರ ಟ್ರಾಲ್‌ಬೋಟ್‌ಗಳು ಹಾಗೂ 350 ಮರದ ಬೋಟ್‌ಗಳಿವೆ. ಆಳ ಸಮುದ್ರ ಟ್ರಾಲ್ ಬೋಟ್‌ಗಳ ಪೈಕಿ ಹೆಚ್ಚಿನವು ಆ.1ರಂದು ಕಡಲಿಗಿಳಿಯಲಿದ್ದು, ಉಳಿದ ಟ್ರಾಲ್‌ ಬೋಟ್‌ಗಳು ಹಾಗೂ 90ರಷ್ಟು ಪರ್ಸೀನ್ ಬೋಟ್‌ಗಳು ಸಮುದ್ರ ಪೂಜೆ ಬಳಿಕ ಕಡಲಿಗಿಳಿಯಲಿವೆ. ಅದರಲ್ಲೂ ಪೂರಕ ಹವಾಮಾನ ಸೃಷ್ಟಿಯ ಬಳಿಕವಷ್ಟೇ ಮರದ ಬೋಟ್‌ಗಳು ಕಡಲಿಗಿಳಿಯುತ್ತವೆ ಎಂದು ಮೀನುಗಾರರ ಮೂಲಗಳು ತಿಳಿಸಿವೆ.

ಕರ್ನಾಟಕ ಕರಾವಳಿ ಮೀನುಗಾರಿಕೆ ಕಾಯ್ದೆ 1986ರನ್ವಯ ಜೂ.1ರಿಂದ ಜು.31ರ ತನಕ 61 ದಿನ ಸಾಂಪ್ರದಾಯಿಕ ಮೀನುಗಾರಿಕೆ ನಿಷೇಧಿಸಿ ಮೀನುಗಾರಿಕಾ ಇಲಾಖೆಯು ಪ್ರತೀ ವರ್ಷ ಆದೇಶ ಹೊರಡಿಸುತ್ತದೆ.

ಅಂದರೆ ಬಲೆ ಉಪಯೋಗಿಸಿ ಯಾಂತ್ರೀಕೃತ ದೋಣಿಗಳ ಮೂಲಕ ಹಾಗೂ 10 ಅಶ್ವಶಕ್ತಿ ಸಾಮರ್ಥ್ಯಕ್ಕಿಂತ ಮೇಲ್ಪಟ್ಟ ಇನ್ ಬೋರ್ಡ್ ಅಥವಾ ಔಟ್ ಬೋರ್ಡ್ ಯಂತ್ರ ಅಳವಡಿಸಿರುವ ಸಾಂಪ್ರದಾಯಿಕ ಮೀನುಗಾರಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಆದರೆ 10 ಅಶ್ವಶಕ್ತಿಯವರೆಗಿನ ಸಾಮರ್ಥ್ಯದ ಮೋಟಾರೀಕೃತ ದೋಣಿ ಹಾಗೂ ಸಾಂಪ್ರದಾಯಿಕ ದೋಣಿಗಳು ಮೀನುಗಾರಿಕೆ ನಡೆಸಲು ಅನುಮತಿ ನೀಡಿದೆ.

ಕರಾವಳಿಯಲ್ಲಿ 2018-19ನೆ ಸಾಲಿನಲ್ಲಿ 3,166 ಕೋ.ರೂ. ಮೌಲ್ಯದ 2,77,747 ಟನ್ ಮೀನು ಹಿಡಿಯಲಾಗಿದೆ. 2017-18ನೆ ಸಾಲಿನ ವರ್ಷಕ್ಕೆ ಹೋಲಿಸಿದರೆ 2018-19ನೆ ಸಾಲಿನ ಮೀನುಗಾರಿಕೆ ಪ್ರಮಾಣ ಮತ್ತು ಮೌಲ್ಯ ಕುಸಿದುದರ ಪರಿಣಾಮ 70 ಕೋ.ರೂ. ವೌಲ್ಯದ ಮೀನುಗಾರಿಕೆ ಕಡಿಮೆಯಾಗಿದೆ. ಕಳೆದ ಋತುವಿನಲ್ಲಿ 3,236.99 ಕೋ.ರೂ. ಮೌಲ್ಯದ 2,92,061 ಟನ್ ಮೀನು ಹಿಡಿಯಲಾಗಿತ್ತು. ಈ ಋತುವಿನಲ್ಲಿ ಬಂಗುಡೆ, ಬೂತಾಯಿ, ಕೊಡ್ಡಾಯಿ, ಅಂಜಲ್ ಮೀನು ಹೆಚ್ಚು ದೊರೆತಿಲ್ಲ. ಆದರೆ ಕಪ್ಪು ಬಣ್ಣದ ಕ್ಲಾಟಿ ಮೀನು ಮತ್ತು ಮದ್ನಾಲ್ ಸಾಕಷ್ಟು ಸಿಕ್ಕಿದೆ.

ಟ್ರಾಲ್‌ಬೋಟ್ ಮೀನುಗಾರರು ಮೀನುಗಾರಿಕೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಬೋಟ್‌ನಲ್ಲಿ ತೆರಳುವ ಮೀನುಗಾರರು ಧಕ್ಕೆಯಲ್ಲಿ ಫ್ಯಾಕ್ಟರಿಯಿಂದ ಮಂಜುಗಡ್ಡೆ ಸಂಗ್ರಹ ಮಾಡಿಕೊಳ್ಳುತ್ತಿದ್ದಾರೆ. ಆ.1ರಂದು ಕೆಲವು ಬೋಟ್‌ಗಳು ಸಮುದ್ರಕ್ಕೆ ಇಳಿಯಲಿದ್ದು, ಉಳಿದವು ಹಂತಹಂತವಾಗಿ ಮೀನುಗಾರಿಕೆಗೆ ತೆರಳಲಿವೆ. ಕೆಲ ಟ್ರಾಲ್ ಬೋಟ್‌ಗಳು ಹಾಗೂ ಪರ್ಸೀನ್ ಬೋಟ್‌ಗಳು ಸಮುದ್ರದ ಪೂಜೆ ಬಳಿಕ ಸಮುದ್ರಕ್ಕೆ ಇಳಿಯಲಿವೆ.

-ನಿತಿನ್ ಕುಮಾರ್, ಮೀನುಗಾರ ಮುಖಂಡ

ಗಿಲ್‌ನೆಟ್ ಮೀನುಗಾರಿಕೆಗೆ ಯಾವುದೇ ತೊಂದರೆಯಾಗದಿದ್ದರೂ ಕೂಡ ಮಳೆ ಬೀಳುವ ಸಮಯಕ್ಕೆ ಸರಿಯಾದ ಮಳೆ ಬೀಳದ ಕಾರಣ ಸಂತಾನೋತ್ಪತ್ತಿ ಆಗದ ಕಾರಣ ಈ ಬಾರಿ ಮೀನು ಉತ್ಪಾದನೆಯಲ್ಲಿ ಹೆಚ್ಚಿನ ಇಳುವರಿ ನಿರೀಕ್ಷೆ ಇಟ್ಟುಕೊಳ್ಳುವ ಹಾಗಿಲ್ಲ. ಇದು ಮೀನುಗಾರಿಕೆಗೆ ಬಹುದೊಡ್ಡ ಹೊಡೆತ ನೀಡಲಿದ್ದು, ಕೇಂದ್ರ ಮತ್ತು ರಾಜ್ಯ ಸರಕಾರ ಮೀನುಗಾರಿಕೆಯ ಬಗ್ಗೆ ವಿಶೇಷ ಆಸಕ್ತಿ ವಹಿಸಿಕೊಳ್ಳುವ ಅಗತ್ಯವಿದೆ.
- ಅಲಿ ಹಸನ್ ಕುದ್ರೋಳಿ, ಅಧ್ಯಕ್ಷರು
ಗಿಲ್‌ನೆಟ್ ಮೀನುಗಾರರ ಸಂಘ, ಮಂಗಳೂರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News