×
Ad

ಉಡುಪಿ: ಭವಿಷ್ಯನಿಧಿ ಪಿಂಚಣಿದಾರರ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಧರಣಿ

Update: 2019-07-31 20:08 IST

ಉಡುಪಿ, ಜು.31: ಭವಿಷ್ಯನಿಧಿ ಪಿಂಚಣಿದಾರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಉಡುಪಿ ತಾಲೂಕು ಭವಿಷ್ಯನಿಧಿ ಪಿಂಚಣಿ ದಾರರ ಸಂಘದ ನೇತೃತ್ವದಲ್ಲಿ ಬುಧವಾರ ಉಡುಪಿಯ ಭವಿಷ್ಯನಿಧಿ ಕಚೇರಿಯ ಮುಂದೆ ಧರಣಿ ನಡೆಸಲಾಯಿತು.

ಧರಣಿಯನ್ನುದ್ದೇಶಿಸಿ ಮಾತನಾಡಿದ ಭವಿಷ್ಯನಿಧಿ ಪಿಂಚಣಿದಾರರ ಸಂಘದ ರಾಜ್ಯ ಉಪಾಧ್ಯಕ್ಷ ಎಚ್.ನರಸಿಂಹ ಮಾತನಾಡಿ, ಕೇಂದ್ರ ಸರಕಾರ ಬೇರೆ ಬೇರೆ ಯೋಜನೆಗಳಿಗೆ ಕೋಟ್ಯಂತರ ರೂ. ಖರ್ಚು ಮಾಡುತ್ತಿದೆ. ಆದರೆ ಈ ದೇಶದ ಸಂಪತ್ತು ಸೃಷ್ಠಿ ಮಾಡಲು ದುಡಿದ ನಿವೃತ್ತ ಪಿಂಚಣಿದಾರರಿಗೆ ಪಿಂಚಣಿ ನೀಡಲು ಹಿಂದೇಟು ಹಾಕುತ್ತಿದೆ. ಇಲಾಖೆಯಲ್ಲಿ ಸಾವಿರಾರು ಕೋಟಿ ಅನಾಮಧೇಯ ಹಣ ಕೊಳೆಯುತ್ತಿದೆ. ಇದರ ಬಡ್ಡಿ ಹಣದಿಂದಲೇ ಪಿಂಚಣಿ ನೀಡಬಹು ದಾಗಿದೆ. ಈ ಬಗ್ಗೆ ಯಾವುದೇ ಜನಪ್ರತಿನಿಧಿಗಳು ಮಾತನಾಡುತಿಲ್ಲ ಎಂದು ದೂರಿದರು.

ಭವಿಷ್ಯನಿಧಿ ವಾಪಾಸ್ಸು ಪಡೆಯಲು ಮತ್ತು ಪಿಂಚಣಿ ಪಡೆಯಲು ಕಂಪೆನಿ ಕಾರ್ಡ್‌ನಲ್ಲಿರುವ ಜನ್ಮ ದಿನಾಂಕವನ್ನು ಧೃಢೀಕರಿಸಬೇಕೆ ಹೊರತು ಆಧಾರ್ ಕಾರ್ಡ್‌ನಲ್ಲಿರುವ ದಿನಾಂಕವನ್ನು ಪರಿಗಣಿಸಬಾರದು. ಇದರಿಂದ ಸಾವಿರಾರು ಕಾರ್ಮಿಕರಿಗೆ ಪಿಂಚಣಿ ಪಡೆಯಲು ಅನುಕೂಲವಾಗುತ್ತದೆ. ಪಿಂಚಣಿ ಹಣ ವನ್ನು ಕನಿಷ್ಠ 6000ರೂ.ಗೆ ಹೆಚ್ಚಿಸಬೇಕು ಮತ್ತು ಕಾಲಕಾಲಕ್ಕೆ ಬೆಲೆ ಏರಿಕೆಗೆ ಅನುಗುಣವಾಗಿ ತುಟ್ಟಿಭತ್ಯೆಯನ್ನು ಹೆಚ್ಚಿಸಬೇಕೆಂದು ಅವರು ಆಗ್ರಹಿಸಿದರು.

ಬಳಿಕ ಉಡುಪಿ ಕಾರ್ಮಿಕ ಭವಿಷ್ಯನಿಧಿ ಕಚೇರಿಯ ಆಯುಕ್ತರ ಮೂಲಕ ಪ್ರಧಾನ ಮಂತ್ರಿಗೆ ಮನವಿ ಸಲ್ಲಿಸಲಾಯಿತು. ಧರಣಿಯಲ್ಲಿ ಸಿಐಟಿಯು ಜಿಲ್ಲಾಧ್ಯಕ್ಷ ವಿಶ್ವನಾಥ ರೈ, ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಸಂಘದ ತಾಲೂಕು ಅಧ್ಯಕ್ಷೆ ಲಲಿತಾ, ಕಾರ್ಯದರ್ಶಿ ಉಮೇಶ್ ಕುಂದರ್, ಖಜಾಂಚಿ ಸುಂದರಿ, ಮುಖಂಡರಾದ ಕೆ.ಲಕ್ಷಣ್, ಕವಿರಾಜ್, ನಳಿನಿ, ಸಂಜೀವ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News