×
Ad

ಮಳೆಕೊಯ್ಲು ಅಳವಡಿಸದಿದ್ದರೆ ಸಮಾಪನ ಪ್ರಮಾಣಪತ್ರ ನೀಡಲ್ಲ: ಪೌರಾಯುಕ್ತ ಕಲ್ಲೋಳಿಕರ್

Update: 2019-07-31 20:12 IST

ಉಡುಪಿ, ಜು.31: ಉಡುಪಿ ನಗರಸಭಾ ವ್ಯಾಪ್ಪಿಯಲ್ಲಿ ಹೊಸದಾಗಿ ನಿರ್ಮಿಸುವ ಮನೆಗಳಿಗೆ ಕಡ್ಡಾಯವಾಗಿ ಮಳೆ ನೀರು ಕೊಯ್ಲು ಅಳವಡಿಸ ಬೇಕು. ಇಲ್ಲದಿದ್ದರೆ ಅಂತಹ ಮನೆಗಳಿಗೆ ಸಮಾಪನ ಪ್ರಮಾಣಪತ್ರವನ್ನು ನೀಡಲಾಗುವುದಿಲ್ಲ ಎಂದು ಉಡುಪಿ ನಗರಸಭೆ ಪೌರಾಯುಕ್ತ ಆನಂದ ಕಲ್ಲೋಳಿಕರ್ ತಿಳಿಸಿದ್ದಾರೆ.

ಉಡುಪಿ ನಗರಸಭಾ ವ್ಯಾಪ್ತಿಯ ಪ್ರತಿ ಮನೆಯಲ್ಲಿ ವಿಶೇಷವಾಗಿ ಹೊಸದಾಗಿ ನಿರ್ಮಿಸುವ ಮನೆಗಳಲ್ಲಿ ಮಳೆ ನೀರು ಕೊಯ್ಲು ಅಳವಡಿಸುವ ಕುರಿತು ಅಜ್ಜರಕಾಡು ಪುರಭವನದಲ್ಲಿ ಬುಧವಾರ ಆಯೋಜಿಸಲಾದ ಬಿಲ್ಡರ್ಸ್‌ ಅಸೋಸಿ ಯೇಶನ್‌ನ ಸರ್ವ ಸದಸ್ಯರ ಹಾಗೂ ಸಿವಿಲ್ ಇಂಜಿನಿಯರ್‌ಗಳ ಸಭೆಯಲ್ಲಿ ಅವರು ಮಾತನಾಡುತಿದ್ದರು.

ರಾಜ್ಯ ಸರಕಾರದ ಅಧಿಸೂಚನೆ ಪ್ರಕಾರ ನಗರದ ಎಲ್ಲ ಮನೆಗಳಲ್ಲಿ ಹಾಗೂ ಹೊಸದಾಗಿ ನಿರ್ಮಿಸುವ ಮನೆಗಳಿಗೆ ಮಳೆ ನೀರು ಕೊಯ್ಲು ಅಳವಡಿಕೆ ಕಡ್ಡಾಯ ಮಾಡಲಾಗಿದೆ. ಮನೆ ಅಥವಾ ಕಟ್ಟಡದ ನಿರ್ಮಾಣ ಕಾರ್ಯ ಪೂರ್ಣಗೊಂಡ ಬಳಿಕ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಲಿದ್ದಾರೆ. ಈ ವೇಳೆ ಮಳೆ ನೀರು ಕೊಯ್ಲು ವಿಧಾನ ಅಳವಡಿಸದಿದ್ದರೆ ಅಂತಹ ಮನೆ ಅಥವಾ ಕಟ್ಟಡಗಳಿಗೆ ಸಮಾಪನ ಪ್ರಮಾಣ ಪತ್ರ ನೀಡಲಾಗುವುದಿಲ್ಲ. ಹಾಗಾಗಿ ಪ್ರತಿ ಯೊಬ್ಬರು ತಮ್ಮ ಮನೆಗಳಿಗೆ ಮಳೆನೀರು ಕೊಯ್ಲು ವಿಧಾನವನ್ನು ಕಡ್ಡಾಯವಾಗಿ ಅಳವಡಿಸಬೇಕು ಎಂದರು.

ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಪರಿಸರ ಅಧಿಕಾರಿ ಲಕ್ಷ್ಮೀಕಾಂತ್ ಮಾತನಾಡಿ, ಅಂತರ್ಜಲ ವೃದ್ಧಿಗೆ ತೆರೆದ ಬಾವಿ, ಕೆರೆ, ಸರೋವರ, ಪುಷ್ಕರಣಿ ಪೂರಕವಾಗಿದ್ದು, ಕೊಳವೆ ಬಾವಿ ಕೊರೆದ ಹೆಚ್ಚಿನ ಕಡೆಗಳಲ್ಲಿ ಭೂಮಿ ಬರಡಾಗಿದೆ. ಇದು ಪ್ರಾಕೃತಿಕ ವಿಕೋಪಕ್ಕೂ ಕಾರಣವಾಗಿದೆ ಎಂದು ತಿಳಿಸಿದರು.

ಅಂತರ್ಜಲ ಇಂದು ಅತ್ಯಂತ ಅಪಾಯಕಾರಿ ಸ್ಥಿತಿಯಲ್ಲಿ ಇದೆ. ಇದು ಪರಿಸರ ವಿನಾಶಕ್ಕೆ ಕಾರಣವಾಗುತ್ತದೆ. ಜಲಕ್ಷಾಮ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿವೆ. ಇದಕ್ಕಾಗಿ ಪ್ರತಿ ಮನೆಯಲ್ಲಿ ಮನೆ ನೀರು ಕೊಯ್ಲು ಅಳವಡಿಸಿಕೊಳ್ಳ ಬೇಕು. ಕೆರೆ, ಸರೋವರ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಅವರು ತಿಳಿಸಿದರು.

ಉಡುಪಿ ಸಿವಿಲ್ ಎಂಜಿನಿಯರ್ಸ್‌ ಸಂಘದ ಅಧ್ಯಕ್ಷ ಎ.ಗೋಪಾಲಕೃಷ್ಣ ಭಟ್, ಉಪಾಧ್ಯಕ್ಷ ಯೋಗೀಶ್ ಚಂದ್ರ, ನಗರಸಭೆ ಸಹಾಯಕ ಕಾರ್ಯಪಾಲಕ ಅಭಿ ಯಂತರ ಗಣೇಶ್ ಕೆ., ಪರಿಸರ ಅಭಿಯಂತರ ರಾಘವೇಂದ್ರ ಬಿ.ಎಸ್. ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News