×
Ad

ಅಮೆರಿಕದಲ್ಲಿ ಗೂಗಲ್ ಸಯನ್ಸ್ ಫೇರ್: 15 ಸಾವಿರ ಡಾಲರ್ ಬಹುಮಾನ ಗೆದ್ದ ಉಪ್ಪಿನಂಗಡಿಯ ನಚಿಕೇತ್-ಅಮನ್

Update: 2019-07-31 20:25 IST

ಉಪ್ಪಿನಂಗಡಿ, ಜು.30: ಅಮೆರಿಕದ ಕ್ಯಾಲಿಫೋರ್ನಿಯಾದ ಗೂಗಲ್ ಕೇಂದ್ರ ಕಚೇರಿಯಲ್ಲಿ ನಡೆದ ಗೂಗಲ್ ಸಯನ್ಸ್ ಫೇರ್ 2018-19ರಲ್ಲಿ ನ್ಯಾಶನಲ್ ಜಿಯೋಗ್ರಾಫಿಕ್ ಎಕ್ಸ್‌ಪ್ಲೋರರ್ ಅವಾರ್ಡ್ ಪ್ರಶಸ್ತಿಯನ್ನು ಉಪ್ಪಿನಂಗಡಿಯ ಇಂದ್ರಪ್ರಸ್ಥ ಪಿಯು ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಾದ ಎ.ಯು. ನಚಿಕೇತ್ ಕುಮಾರ್ ಹಾಗೂ ಅಮನ್ ಕೆ.ಎ. ಅವರ ತಂಡ ಗೆದ್ದುಕೊಂಡರೆ, ಇನ್‌ಸ್ಪೈರಿಂಗ್ ಎಜುಕೇಟರ್ ಅವಾರ್ಡ್ ಅನ್ನು ಇಂದ್ರಪ್ರಸ್ಥ ವಿದ್ಯಾಲಯದ ವಿಜ್ಞಾನ ಶಿಕ್ಷಕಿ, ನಚಿಕೇತ್-ಅಮನ್ ತಂಡದ ಮಾರ್ಗದರ್ಶಿ ಶಿಕ್ಷಕಿ ಕೆ.ನಿಶಿತಾರಿಗೆ ಲಭಿಸಿದೆ.

ಜಾಗತಿಕ ಮಟ್ಟದಲ್ಲಿ ವಿಜ್ಞಾನ ಸಂಶೋಧನೆಗಳನ್ನು ಸ್ಪರ್ಧಾ ಕಣಕ್ಕೆ ಆಹ್ವಾನಿಸುವ ಗೂಗಲ್ ಸಯನ್ಸ್ ಫೇರ್ ವಿಭಾಗವು, ಸಲ್ಲಿಸಲ್ಪಟ್ಟ ವಿಜ್ಞಾನ ಸಂಶೋಧನೆಗಳ ಪೈಕಿ ಮೊದಲ ಹಂತದಲ್ಲಿ 1,000 ಸಂಶೋಧನೆಗಳನ್ನು ಆಯ್ಕೆ ಮಾಡುತ್ತದೆ. ಹೀಗೆ ಆಯ್ಕೆಯಾದ ತಂಡಗಳ ಪೈಕಿ ಮಾನದಂಡ ಆಧಾರಿತ ರೀಜನಲ್ ಫೈನಲಿಸ್ಟ್ ಆಗಿ 100 ತಂಡಗಳನ್ನು ಆಯ್ಕೆ ಮಾಡಲಾಗುವುದು. ಈ ನೂರು ತಂಡಗಳ ಪೈಕಿ 20 ತಂಡಗಳನ್ನು ಗ್ಲೋಬಲ್ ಫೈನಲಿಸ್ಟ್ ಆಗಿ ಆಯ್ಕೆಮಾಡಿ ಅಂತಹ ತಂಡಗಳಿಗೆ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನಡೆಯುವ ಗೂಗಲ್ ಸಯನ್ಸ್ ಫೇರ್ ಪ್ರಶಸ್ತಿ ಪ್ರಧಾನ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುತ್ತದೆ.

ಸರ್ವಾಂಗೀಣ ಸಾಧನೆ ತೋರುವ ತಂಡಕ್ಕೆ ಗೂಗಲ್ ಗ್ರಾಂಡ್ ಪ್ರೈಝ್‌ಪ್ರಶಸ್ತಿಯು ಲಭಿಸಿದ್ದು, 50 ಸಾವಿರ ಅಮೇರಿಕನ್ ಡಾಲರ್ ಬಹುಮಾನ ವುಳ್ಳ ಈ ಪ್ರಶಸ್ತಿಯನ್ನು ಐಯರ್‌ಲೆಂಡಿನ ಫಿಯಾನ್ ಪೆರೆರಾ ಗೆದ್ದುಕೊಂಡಿದ್ದಾರೆ.

ಪರಿಸರದಲ್ಲಿನ ಸಂಶೋಧನೆಗಾಗಿ ನೀಡಲಾಗುವ ನ್ಯಾಶನಲ್ ಜಿಯೋಗ್ರಾಫಿಕ್ ಎಕ್ಸ್ ಪ್ಲೋರರ್ ಪ್ರಶಸ್ತಿಯು 15 ಸಾವಿರ ಅಮೆರಿಕನ್ ಡಾಲರ್ ನಗದು ಬಹುಮಾನವನ್ನು ಹೊಂದಿದ್ದು, ಅದನ್ನು ಭಾರತವನ್ನು ಪ್ರತಿನಿಧಿಸಿದ ಎ.ಯು.ನಚಿಕೇತ್ ಕುಮಾರ್ ಹಾಗೂ ಅಮನ್ ಕೆ.ಎ. ರವರ ತಂಡ ಗೆದ್ದುಕೊಂಡಿದೆ.

ಸಂಶೋಧನಾ ಕ್ಷೇತ್ರದಲ್ಲಿ ಎಳೆಯ ಮನಸ್ಸುಗಳಿಗೆ ಉತ್ತಮ ಮಾರ್ಗದರ್ಶನ ನೀಡಿ ಸಂಶೋಧನಾ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವ ಮಾರ್ಗದರ್ಶಿ ಶಿಕ್ಷಕರಿಗೆ ನೀಡಲಾಗುವ ಇನ್ಸ್‌ಫಯರಿಂಗ್ ಎಜುಕೇಟರ್ ಪ್ರಶಸ್ತಿಯು 5 ಸಾವಿರ ಅಮೇರಿಕನ್ ಡಾಲರ್ ನಗದು ಬಹುಮಾನವನ್ನು ಹೊಂದಿದ್ದು, ಈ ಪ್ರಶಸ್ತಿಗೆ ಉಪ್ಪಿನಂಗಡಿಯ ಇಂದ್ರಪ್ರಸ್ಥ ವಿದ್ಯಾಲಯದ ವಿಜ್ಞಾನ ಶಿಕ್ಷಕಿ ನಿಶಿತಾ ಕೆ. ಗೆದ್ದುಕೊಂಡಿದ್ದಾರೆ.

ಜಗತ್ತಿನ ವಿವಿಧೆಡೆಗಳಿಂದ ಆಗಮಿಸಿದ ಒಟ್ಟು 20 ಗ್ಲೋಬಲ್ ಫೈನಲಿಸ್ಟ್‌ಗಳ ಪೈಕಿ ಭಾರತದಿಂದ ಒಟ್ಟು ನಾಲ್ಕು ತಂಡಗಳು ಭಾಗವಹಿಸಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News