ಮಂಗಳೂರು: ಅಕ್ರಮ ಮರಳು ಸಾಗಾಟ ಆರೋಪ: 57 ಟನ್ ಮರಳು ವಶ
ಮಂಗಳೂರು, ಜು.31: ಅಕ್ರಮ ಮರಳು ಸಾಗಾಟ ಆರೋಪದಲ್ಲಿ ಮೂರು ಲಾರಿಗಳ ಸಹಿತ ಲಕ್ಷಾಂತರ ರೂ. ಮೌಲ್ಯದ 57 ಟನ್ ಮರಳನ್ನು ಕದ್ರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಂಡ್ಯ ಜಿಲ್ಲೆಯ ವರದಕುಮಾರ್ (37), ಬೆಂಗಳೂರು ನಾಗರಬಾವಿ ನಿವಾಸಿ ವಿಠಲ್ (38), ಹಾಸನ ಜಿಲ್ಲೆಯ ಅರಕಳಗೂಡು ತಾಲೂಕಿನ ಮರಡಿ ನಿವಾಸಿ ಕೇಶವ (25), ಮಂಗಳೂರಿನ ಕಾವೂರು ನಿವಾಸಿ ದಯಾನಂದ (38) ಬಂಧಿತ ಆರೋಪಿಗಳು.
ಘಟನೆ ವಿವರ
ಆರೋಪಿಗಳು ಮಂಗಳೂರು ನಗರದ ಅಡ್ಯಾರ್ ಮತ್ತು ಅರ್ಕುಳಬೈಲ್‌ನಿಂದ ಉಡುಪಿ ಮಾರ್ಗವಾಗಿ ಅಕ್ರಮ ಮರಳು ಸಾಗಾಟ ನಡೆಯುತ್ತಿ ರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ, ಸೊತ್ತನ್ನು ವಶಕ್ಕೆ ಪಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಮಂಗಳೂರು ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ನಿರ್ದೇಶನದಂತೆ ಡಿಸಿಪಿಗಳಾದ ಹನುಮಂತರಾಯ, ಲಕ್ಷ್ಮೀಗಣೇಶ್ ಮಾರ್ಗದರ್ಶನದಲ್ಲಿ ಎಸಿಪಿ ಭಾಸ್ಕರ್ ಒಕ್ಕಲಿಗ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮಂಗಳೂರು ಪೂರ್ವ (ಕದ್ರಿ) ಪೊಲೀಸ್ ಇನ್‌ಸ್ಪೆಕ್ಟರ್ ಶಾಂತಾರಾಮ್, ಪಿಎಸ್ಸೈ ಮಾರುತಿ ಎಸ್.ವಿ., ಎಎಸ್ಸೈ ಮನೋಹರ್, ಹೆಡ್‌ಕಾನ್‌ಸ್ಟೇಬಲ್‌ಗಳಾದ ಉಮೇಶ್, ಪ್ರಶಾಂತ್, ಜಯಾನಂದ, ಗಿರೀಶ್ ಜೋಗಿ, ಕಾನ್‌ಸ್ಟೇಬಲ್‌ಗಳಾದ ಬೀರೇಶ್, ಆನಂದ, ಸುರೇಂದ್ರ ಭಾಗವಹಿಸಿದ್ದರು.