×
Ad

ಗ್ರಂಥಾಲಯದಲ್ಲಿ 2,500 ಪುಸ್ತಕಗಳು ಪತ್ತೆ: ಆಝಂ ಖಾನ್ ಪುತ್ರ ಪೊಲೀಸ್ ವಶಕ್ಕೆ

Update: 2019-07-31 21:29 IST

ಲಕ್ನೋ, ಜು. 31: ರಾಮ್‌ಪುರದಲ್ಲಿರುವ ಮುಹಮ್ಮದ್ ಅಲಿ ಜೌಹರ್ ವಿಶ್ವವಿದ್ಯಾನಿಲಯದಲ್ಲಿ ದಾಳಿ ನಡೆಸಿದ ಸಂದರ್ಭ ಪೊಲೀಸ್ ಅಧಿಕಾರಿಗಳಿಗೆ ಅಡ್ಡಿ ಉಂಟು ಮಾಡಿದ ಆರೋಪದಲ್ಲಿ ಸಮಾಜವಾದಿ ಪಕ್ಷದ ನಾಯಕ ಆಝಂ ಖಾನ್ ಅವರ ಪುತ್ರನನ್ನು ಪೊಲೀಸರು ಬುಧವಾರ ವಶಕ್ಕೆ ತೆಗೆದುಕೊಂಡಿದ್ದಾರೆ.

ದಾಳಿ ನಡೆಸುತ್ತಿರುವಾಗ ಅಡ್ಡಿ ಉಂಟು ಮಾಡಿರುವುದು ಹಾಗೂ ಪೊಲೀಸ್ ಅಧಿಕಾರಿಗಳ ಕರ್ತವ್ಯಕ್ಕೆ ತೊಂದರೆ ಉಂಟು ಮಾಡಿರುವ ಆರೋಪದಲ್ಲಿ ಉತ್ತರಪ್ರದೇಶದ ಸಮಾಜವಾದಿ ಪಕ್ಷದ ಶಾಸಕ ಅಬ್ದುಲ್ಲಾ ಆಝಂ ಖಾನ್ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ರಾಮ್‌ಪುರದ ಪೊಲೀಸ್ ಅಧೀಕ್ಷಕ ಅಜಯ್‌ಪಾಲ್ ಶರ್ಮಾ ತಿಳಿಸಿದ್ದಾರೆ. ಅಬ್ದುಲ್ಲಾ ಆಝಂ ಖಾನ್ ಅವರ ತಂದೆ ಮುಹಮ್ಮದ್ ಅಝಂ ಖಾನ್ ಅವರು ಮುಹಮ್ಮದ್ ಅಲಿ ಜೌಹರ್ ವಿಶ್ವವಿದ್ಯಾನಿಲಯದ ಸ್ಥಾಪಕ ಹಾಗೂ ಕುಲಪತಿ.

ಈ ವಿಶ್ವವಿದ್ಯಾನಿಲಯದಲ್ಲಿ ಇದುವರೆಗೆ ಕಳವುಗೈದ 2,500 ಪುಸ್ತಕಗಳು ದೊರೆತಿವೆ ಎಂದು ಶರ್ಮಾ ತಿಳಿಸಿದ್ದಾರೆ.

‘‘ಮಂಗಳವಾರ ಆರಂಭವಾದ ದಾಳಿ ಇನ್ನು ಕೂಡ ಮುಂದುವರಿದಿದೆ. ಇಲ್ಲಿ ಅಪರೂಪದ ಪುಸ್ತಕಗಳು ಪತ್ತೆಯಾಗಿವೆ’’ ಎಂದು ಪೊಲೀಸ್ ಪ್ರಧಾನ ನಿರ್ದೇಶಕ ಒ.ಪಿ. ಸಿಂಗ್ ತಿಳಿಸಿದ್ದಾರೆ. 50 ಬಾಕ್ಸ್‌ಗಳಲ್ಲಿ 2,500 ಪುಸ್ತಕಗಳು ಪತ್ತೆಯಾಗಿವೆ. ಈ ವಿಷಯದ ಕುರಿತು ತನಿಖೆ ಮುಂದುವರಿದಿದೆ. ಈ ಪುಸ್ತಕ ಪ್ರಾಚೀನ ಕಾಲದ್ದು ಹಾಗೂ ಮೌಲ್ಯಯುತವಾದದ್ದು ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. 9000 ಪುಸ್ತಕಗಳನ್ನು ಕಳವುಗೈಯಲಾಗಿದೆ ಹಾಗೂ ಅದನ್ನು ಜೌಹರ್ ವಿಶ್ವವಿದ್ಯಾನಿಲಯಕ್ಕೆ ಕೊಂಡೊಯ್ಯಲಾಗಿದೆ ಎಂದು ಮದ್ರಸ ಆಲಿಯಾ ಎಂದು ಈ ಹಿಂದೆ ಕರೆಯಲಾಗುತ್ತಿದ್ದ ರಾಮ್‌ಪುರದ ಓರಿಯಂಟಲ್ ಕಾಲೇಜಿನ ಪ್ರಾಂಶುಪಾಲ ಝುಬೈರ್ ಖಾನ್ ದಾಖಲಿಸಿದ ಎಫ್‌ಐಆರ್ ಹಿನ್ನೆಲೆಯಲ್ಲಿ ಜೂನ್ 16ರಂದು ಪೊಲೀಸರು ತನಿಖೆ ಆರಂಭಿಸಿದ್ದರು.

ಮದ್ರಸ ಆಲಿಯಾಕ್ಕೆ ಸುಮಾರು 250 ವರ್ಷಗಳ ಇತಿಹಾಸ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News