×
Ad

ಆ.3: ಮಂಗಳೂರಿನಲ್ಲಿ ‘ಮತ್ತೆ ಕಲ್ಯಾಣ’ ಕಾರ್ಯಕ್ರಮ

Update: 2019-07-31 22:30 IST

ಮಂಗಳೂರು, ಜು.31: ನಾಡಿನಲ್ಲಿ ಸಾಮರಸ್ಯ ಮೂಡಿಸುವ ಸಲುವಾಗಿ ಚಿತ್ರದುರ್ಗ ಜಿಲ್ಲೆಯ ಸಾಣೇಹಳ್ಳಿ ಮಠದ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯ ಸಾರಥ್ಯದಲ್ಲಿ 2019ರ ಆ.1ರಿಂದ 30ರ ತನಕ ‘ಮತ್ತೆ ಕಲ್ಯಾಣ’ ಎಂಬ ರಾಜ್ಯಮಟ್ಟದ ಜನಾಂದೋಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಆಗಸ್ಟ್ 3ರಂದು ‘ಮತ್ತೆ ಕಲ್ಯಾಣ’ದ ಕಾರ್ಯಕ್ರಮಗಳು ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಲಿದೆ ಎಂದು ‘ಮತ್ತೆ ಕಲ್ಯಾಣ’ ದ.ಕ. ಜಿಲ್ಲಾ ಸಮಿತಿಯ ಸಂಯೋಜಕ ಉಮರ್ ಯು.ಎಚ್. ತಿಳಿಸಿದ್ದಾರೆ.

ಬುಧವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ನಾಡಿನ ಪ್ರಮುಖ ಜನಪರ ಸ್ವಾಮೀಜಿಗಳು, ಚಿಂತಕರು, ಪ್ರಗತಿಪರರು, ಸಾಹಿತಿಗಳು, ಕಲಾವಿದರು ಹಾಗೂ ಸಂಘಟಕರನ್ನೊಳಗೊಂಡ ಸಲಹಾ ಸಮಿತಿಯಿರುವ ’ಸಹಮತ ವೇದಿಕೆ’ ಈ ಆಂದೋಲನವನ್ನು ಮುನ್ನಡೆಸುತ್ತಿದೆ. ಆ. 3ರಂದು ಪೂರ್ವಾಹ್ನ 11ಕ್ಕೆ ಸ್ವಾಮೀಜಿಯ ಸಾನಿಧ್ಯದಲ್ಲಿ ಕಾಲೇಜು ವಿದ್ಯಾರ್ಥಿಗಳೊಂದಿಗೆ ಮುಕ್ತ ಸಂವಾದ ಕಾರ್ಯಕ್ರಮ ನಡೆಯಲಿದೆ.

ಕರ್ನಾಟಕ ಚಲನಚಿತ್ರ ಅಕಾಡಮಿಯ ಅಧ್ಯಕ್ಷ ನಾಗತಿಹಳ್ಳಿ ಚಂದ್ರಶೇಖರ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಅಪರಾಹ್ನ 2ರಿಂದ 4ರ ತನಕ ಪದವಿ ಪೂರ್ವ ಮತ್ತು ಪದವಿ ವಿದ್ಯಾರ್ಥಿಗಳಿಗೆ ‘ವಚನಗಳು ಮತ್ತು ಸಹಬಾಳ್ವೆ’ ಎಂಬ ವಿಷಯದಲ್ಲಿ ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆ ನಡೆಯಲಿದೆ ಎಂದರು.

ಸಾಮರಸ್ಯದ ನಡಿಗೆ

ಸಂಜೆ 4:30ಕ್ಕೆ ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಪುರಭವನದ ತನಕ ನಡೆಯಲಿರುವ ಸಾಮರಸ್ಯದ ನಡಿಗೆಯಲ್ಲಿ ರಾಮಕೃಷ್ಣ ಮಠದ ಏಕಗಮ್ಯಾನಂದ ಸ್ವಾಮೀಜಿ, ಸಂದೇಶ ಪ್ರತಿಷ್ಠಾನದ ನಿರ್ದೇಶಕ ಫಾ. ಫ್ರಾನ್ಸಿಸ್ ಅಸಿಸ್ಸಿ ಅಲ್ಮೇಡಾ, ಸಿಒಡಿಪಿ ಸಂಸ್ಥೆಯ ಫಾ. ಓಸ್ವಾಲ್ಡ್ ಮೊಂತೇರೊ, ಉಳ್ಳಾಲ ದರ್ಗಾದ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್, ಸಿಎಸ್‌ಐ ದಕ್ಷಿಣ ಕರ್ನಾಟಕ ಧರ್ಮ ಪ್ರಾಂತದ ಬಿಷಪ್ ವಂ.ಮೋಹನ್ ಮನೋರಾಜ್, ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಕೆ. ಮುಹಮ್ಮದ್, ಬ್ರಹ್ಮಕುಮಾರಿ ವಿಶ್ವೇಶ್ವರಿ ಅವರನ್ನೊಳಗೊಂಡಂತೆ ವಿವಿಧ ಧರ್ಮ, ಜಾತಿಗಳ ಮುಖಂಡರು ಹಾಗೂ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಕರಾವಳಿಯ ಸಾಂಸ್ಕೃತಿಕ ವೈಭವವನ್ನು ಪ್ರತಿಬಿಂಭಿಸುವ ಕಲಾತಂಡಗಳು ಸಾಮರಸ್ಯದ ನಡಿಗೆಯ ಮೆರುಗನ್ನು ಹೆಚ್ಚಿಸಲಿವೆ ಎಂದರು.

ಸಂಜೆ 5:30ಕ್ಕೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವಾರ ಅಧ್ಯಕ್ಷತೆಯಲ್ಲಿ ನಡೆಯಲಿರುವ ‘ಸಾರ್ವಜನಿಕ ಸಮಾವೇಶ’ದಲ್ಲಿ ಕರ್ನಾಟಕ ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್. ಶಂಕರ್ ಹಾಗೂ ಪ್ರಾಧ್ಯಾಪಕಿ ಡಾ. ಶುಭಾ ಮರವಂತೆ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಸಂಜೆ 7:30ಕ್ಕೆ ‘ಮೋಳಿಗೆ ಮಾರಯ್ಯ’ ನಾಟಕ ಪ್ರದರ್ಶನ ನಡೆಯಲಿದ್ದು, ಬಳಿಕ ಸಾಮೂಹಿಕ ಸಹಭೋಜನದ ವ್ಯವಸ್ಥೆ ಮಾಡಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಹಮತ ವೇದಿಕೆಯ ದ.ಕ. ಜಿಲ್ಲಾ ಸಂಚಾಲಕ ಪ್ರೊ. ಕೆ.ಎಸ್. ಜಯಪ್ಪ, ಸದಸ್ಯರಾದ ಜಿ.ವಿ.ರಾಜಶೇಖರ್, ತಾರನಾಥ ಗಟ್ಟಿ ಕಾಪಿಕಾಡ್, ಬ್ರಹ್ಮಕುಮಾರಿ ವಿಶ್ವೇಶ್ವರಿ, ರೇಮಂಡ್ ಡಿಕುನ್ಹಾ, ಡಾ. ಸಿದ್ದೇಶ್, ಸುಮಾ ಎ.ಮಾನ್ವಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News