×
Ad

ರಾಷ್ಟ್ರೀಯ ವೈದ್ಯಕೀಯ ಮಸೂದೆಗೆ ವಿರೋಧ: ವೈದ್ಯರಿಂದ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ

Update: 2019-07-31 22:35 IST

ಪುತ್ತೂರು: ನೂತನ ರಾಷ್ಟ್ರೀಯ ವೈದ್ಯಕೀಯ ಮಸೂದೆಯನ್ನು ವಿರೋಧಿಸಿ ಭಾರತೀಯ ವೈದ್ಯಕೀಯ ಸಂಘ ಕರೆ ನೀಡಿದ್ದ ಒಂದು ದಿನದ ಸಾಂಕೇತಿಕ ಬಂದ್ ಗೆ ಪುತ್ತೂರು ತಾಲೂಕಿನ ವೈದ್ಯರು ಬುಧವಾರ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ವ್ಯಕ್ತಪಡಿಸಿದರು.  

ಪುತ್ತೂರು ತಾಲೂಕಿನಲ್ಲಿ ಸಾಂಕ್ರಾಮಿಕ ರೋಗಗಳಾದ  ಡೆಂಗ್ಯೂ, ಮಲೇರಿಯಾ ಮತ್ತು  ಜ್ವರ ಪೀಡಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದು,  ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳು ಹೆಚ್ಚಿನ ಸಂಖ್ಯೆ ಕಂಡುಬರುತ್ತಿದೆ. ಈ ಹಿನ್ನಲೆಯಲ್ಲಿ ವೈದ್ಯರು ತುರ್ತು ಚಿಕಿತ್ಸೆಗೆ ಸ್ಪಂಧಿಸುವ ನಿರ್ಧಾರ ದೊಂದಿಗೆ ಪ್ರತಿಭಟನೆಯನ್ನು ಸಾಂಕೇತಿಕ ರೂಪದಲ್ಲಿ ನಡೆಸಿದರು. ಖಾಸಗಿ ಆಸ್ಪತ್ರೆಗಳಲ್ಲಿ ಒಳ ರೋಗಿಗಳ ಮತ್ತು ತುರ್ತು ಸಂದರ್ಭಗಳ ವೈದ್ಯಕೀಯ ಸೇವೆಯನ್ನು ರೋಗಿಗಳಿಗೆ ನೀಡಲಾಯಿತು. 

ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರತಿದಿನ 500ಕ್ಕೂ ಹೆಚ್ಚು ಹೊರ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಬುಧವಾರ ಸರಕಾರಿ ಆಸ್ಪತ್ರೆಯ ಹೊರರೋಗಿ ವಿಭಾಗದಲ್ಲಿ 600ಕ್ಕೂ ಹೆಚ್ಚು ರೋಗಿಗಳು ವೈದ್ಯಕೀಯ ಸೇವೆ ಪಡೆದುಕೊಂಡರು. ಸಾಂಕ್ರಾಮಿಕ ಜ್ವರದ ಹಿನ್ನೆಲೆಯಲ್ಲಿ ಕಳೆದ ವಾರದಿಂದ ಸರ್ಕಾರಿ ಆಸ್ಪತ್ರೆಯಲ್ಲಿ ಹೊರ ರೋಗಿಗಳ ಸಂಖ್ಯೆಯೂ ಹೆಚ್ಚಿತ್ತು. 

ವೈದ್ಯರ ಮುಷ್ಕರಕ್ಕೆ ಪುತ್ತೂರಿನ ಭಾರತೀಯ ವೈದ್ಯಕೀಯ ಸಂಘವು ಬೆಂಬಲವನ್ನು ವ್ಯಕ್ತ ಪಡಿಸಿ ತುರ್ತು ಚಿಕಿತ್ಸೆ ನೀಡುವ ಮೂಲಕ ಸಾಂಕೇತಿ ಕವಾಗಿ ಮುಷ್ಕರದಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News