ಭಟ್ಕಳ: ತಾಲೂಕಿನ ಪ್ರಸಿದ್ಧ ಮಾರಿ ಜಾತ್ರೆ ಆರಂಭ

Update: 2019-07-31 17:15 GMT

ಭಟ್ಕಳ: ತಾಲೂಕಿನ ಸಪ್ರಸಿದ್ಧ ಮಾರಿ ಜಾತ್ರೆಯೂ ಬುಧವಾರ ಇಲ್ಲಿನ ಮಾರಿಕಾಂಬಾ ದೇವಸ್ಥಾನದ ಗದ್ದುಗೆ ಏರುವುದರ ಮೂಲಕ ವಿದ್ಯುಕ್ತವಾಗಿ ಚಾಲನೆಗೊಂಡಿದ್ದು, ಭಕ್ತರು ಅತ್ಯಂತ ಶ್ರದ್ಧಾ ಮನೋಭವದಿಂದ ಮಾರಿದೇವಿಗೆ ಹರಕೆ ಕಾಣಿಕೆಯನ್ನು ಅರ್ಪಿಸಿದರು. 

ಅದ್ಧೂರಿಯಾಗಿ ನಡೆಯುವ ಮಾರಿ ಜಾತ್ರೆಗಳಲ್ಲಿ ಭಟ್ಕಳ ತಾಲೂಕಿನ ಮಾರಿ ಜಾತ್ರೆಯು ಸಹ ಒಂದು. ಸುಮಾರು 25 ವರ್ಷಗಳ ಹಿಂದೆ ಮಾರಿಜಾತ್ರೆ ಸಂಪೂರ್ಣವಾಗಿ ಗ್ರಾಮದೇವತೆಯ ಉತ್ಸವವಾಗಿದ್ದು, ಹಿಂದುಳಿದವರ ಹಾಗೂ ಪರಿಶಿಷ್ಠ ಜಾತಿ ಪಂಗಡದವರ ಮುಂದಾಳತ್ವದಲ್ಲಿ ನಡೆಯುತಿದ್ದ ವಿಶಿಷ್ಠ ಜಾತ್ರೆಯಾಗಿತ್ತು.

ಬುಧವಾರ ಮುಂಜಾನೆ ಕರೆತರಲಾದ ಮಾರಿದೇವಿಯ ಮೂರ್ತಿಯನ್ನು ಮಾರಿಕಾಂಬಾ ದೇವಿಯ ಎದುರಿನ ಪ್ರಾಂಗಣದ ಗರ್ಭಗುಡಿಯ ಹೊರಗಡೆ ಮಾರಿದೇವಿಯನ್ನು ಪ್ರತಿಷ್ಠಾಪನೆ ಮಾಡಲಾಯಿತು. 

ಎರಡು ದಿವಸ ನಡೆಯುವ ಈ ಜಾತ್ರೆಯಲ್ಲಿ ಬುಧವಾರದಂದು ಮೊದಲನೇ ದಿವಸ ಪರ ಊರಿನವರು ಪೂಜೆ, ಸೇವೆ ಸಲ್ಲಿಸಿ ಹಬ್ಬ ಆಚರಿಸಿದ್ದಾರೆ. ಎರಡನೇ ದಿನವಾದ ಗುರುವಾರದಂದು ಸ್ಥಳೀಯರು ವಿಶೇಷ ಪೂಜೆ, ಸೇವೆ ಸಲ್ಲಿಸಿ ಹಬ್ಬ ಆಚರಿಸುತ್ತಾರೆ. ಈ ಹಬ್ಬದ ಹೆಸರಿನಲ್ಲಿ ಭಕ್ತರು ಕೋಳಿಯನ್ನು ತಮ್ಮ ಮನೆಯಲ್ಲಿಯೇ ಕತ್ತರಿಸಿ ದೇವಿಗೆ ರಕ್ತ ಸಮರ್ಪಿಸುವ ಆಚರಣೆಯೂ ಉಂಟು. ಸಂಭ್ರಮದಿಂದ ಜರುಗುವ ಈ ಜಾತ್ರೆಗೆ ತಾಲೂಕಿನ ಹಾಗೂ ಹೊರ ತಾಲೂಕಿನ ಸಮಸ್ತ ಭಕ್ತಾದಿಗಳು ಆಗಮಿಸಿದ್ದು, ಗ್ರಾಮೀಣ ಭಾಗದ ಜನರು ಹಬ್ಬವನ್ನು ವಿಶೇಷವಾಗಿ ಆಚರಿಸಿದ್ದಾರೆ. 

ಮಾರಿರೂಪದಲ್ಲಿ ಕುಳಿತಿರುವ ಈ ದೇವಿಗೆ ಭಕ್ತರು ಊರಿಗೆ ಬರಬಹುದಾದ ಕಣ್ಣು ಬೇನೆ, ಸಿಡುಬು ಹಾಗು ಇನ್ನಿತರ ಸಾಂಕ್ರಾಮಿಕ ರೋಗಗಳು ಬಾರದೇ ತಡೆಗಟ್ಟುವಂತೆ ಭಕ್ತಿಯಿಂದ ಹೂವಿನ ಟೋಪಿ, ಎಲೆಯಿಂದ ಮಾಡಿದ ಹೂ ಕಟ್ಟು, ಬೆಳ್ಳಿಯ ಕಣ್ಣುಗಳನ್ನು ಅರ್ಪಿಸಿ ಕಾಪಾಡುವಂತೆ ಮೊರೆ ಇಡುವುದು ಈ ಜಾತ್ರೆಯ ವಿಶೇಷತೆಗಳಲ್ಲಿ ಒಂದಾಗಿದ್ದು, ಈ ಬಾರಿಯೂ ಸಹ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಹರಕೆ ತಿರಿಸುವಲ್ಲಿ ಪಾಲ್ಗೊಂಡಿದ್ದಾರೆ. ಪ್ರತಿ ವರ್ಷವೂ ಕೂಡಾ ತಮಗೆ ಬಂದ ಕಷ್ಟ ಕಾರ್ಪಣ್ಯಗಳು ದೂರಾಗಲಿ ಎಂದು ಹರಿಕೆ ಹೊತ್ತ ಭಕ್ತರು, ವಾರ್ಷಿಕ ಜಾತ್ರೆಯಲ್ಲಿ ಹರಿಕೆ ತೀರಿಸುವುದು ವಾಡಿಕೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News