ಗುಂಪುಹತ್ಯೆ ಬಗ್ಗೆ ಧ್ವನಿಯೆತ್ತಿದವರ ವಿರುದ್ಧ ಪ್ರಧಾನಿಗೆ ರಕ್ತದಲ್ಲಿ ಪತ್ರ ಬರೆದ ಹಿಂದೂ ಮಹಾಸಭಾ !

Update: 2019-07-31 17:20 GMT

ಹೊಸದಿಲ್ಲಿ, ಜು. 31: ದ್ವೇಷಾಪರಾಧ ಹಾಗೂ ಗುಂಪಿನಿಂದ ಥಳಿಸಿ ಹತ್ಯೆ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಹಿರಂಗ ಪತ್ರ ಬರೆದ 49 ಖ್ಯಾತ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿ ಅಖಿಲ ಭಾರತ ಹಿಂದೂ ಮಹಾಸಭಾ ಪ್ರಧಾನಿಗೆ ಜುಲೈ 30ರಂದು ಪತ್ರಗಳನ್ನು ಬರೆದಿದೆ.

 ಖ್ಯಾತ ವ್ಯಕ್ತಿಗಳ ಪತ್ರಕ್ಕೆ ವಿರುದ್ಧವಾಗಿ ಮಹಾಸಭಾದ ನಾಯಕರು ರಕ್ತದಲ್ಲಿ ಬರೆದ 101 ಪತ್ರಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ರವಾನಿಸಿದ್ದಾರೆ. ಅಲ್ಲದೆ ಪತ್ರದಲ್ಲಿ, ‘‘ಇಂತಹ ವಂಚಕರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಬೇಕು. ಅವರ ಎಲ್ಲ ರಾಷ್ಟ್ರ ಪ್ರಶಸ್ತಿಗಳನ್ನು ಹಿಂದೆ ತೆಗೆದುಕೊಳ್ಳಬೇಕು’’ ಎಂದು ಆಗ್ರಹಿಸಿದ್ದಾರೆ. ಮಸ್ಲಿಮರು ಹಾಗೂ ದಲಿತರ ಗುಂಪಿನಿಂದ ಥಳಿಸಿ ಹತ್ಯೆಯ ಘಟನೆಗಳನ್ನು ದೇಶದ ಗೌರವಕ್ಕೆ ಧಕ್ಕೆ ಉಂಟು ಮಾಡಲು ಬಳಸಲಾಗುತ್ತಿದೆ. ಈ ಪಿತೂರಿಯನ್ನು ಬಹಿರಂಗ ಗೊಳಿಸಬೇಕು ಹಾಗೂ ಈ ವಿಷಯ ಹರಡುತ್ತಿರವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮಹಾಸಭಾದ ವಕ್ತಾರ ಅಶೋಕ್ ಪಾಂಡೆ ಹೇಳಿದ್ದಾರೆ.

 ದಲಿತರು ಹಾಗೂ ಅಲ್ಪಸಂಖ್ಯಾತರನ್ನು ಸಮರ್ಥಿಸಿಕೊಳ್ಳಲು ಇಂತಹ ಮಾನವ ಹಕ್ಕು ಗುಂಪುಗಳು ಪ್ರಯತ್ನಿಸುತ್ತಿವೆ. ಆದರೆ, ಕಾಶ್ಮೀರದಲ್ಲಿ ಹಿಂದೂಗಳು ಗುರಿಯಾಗುತ್ತಿರುವುದರ ಬಗ್ಗೆ ಅಥವಾ ಭಯೋತ್ಪಾದಕರು ಹಿಂದೂಗಳ ರಕ್ತ ಸುರಿಸುತ್ತಿರುವ ಬಗ್ಗೆ ಯಾವಾಗಲು ಮೌನವಾಗುತ್ತವೆ. ಈ ಗುಂಪು ದೇಶವನ್ನು ವಿಭಜಿಸಲು ಪ್ರಯತ್ನಿಸುತ್ತಿದೆ ಎಂದು ಪಾಂಡೆ ಹೇಳಿದ್ದಾರೆ.

ಜುಲೈ 23ರಂದು ಚಿತ್ರ ನಿರ್ದೇಶಕ ಮಣಿ ರತ್ನಂ, ಅನುರಾಗ್ ಕಶ್ಯಪ್, ಶ್ಯಾಮ್ ಬೆನಗಲ್, ಅಪರ್ಣಾ ಸೇನ್, ಗಾಯಕಿ ಶೋಭಾ ಮುದ್ಗಲ್ ಹಾಗೂ ಇತಿಹಾಸಕಾರ ರಾಮಚಂದ್ರ ಗುಹಾ ಸಹಿತ 49 ಖ್ಯಾತ ವ್ಯಕ್ತಿಗಳು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ದೇಶದಲ್ಲಿ ನಡೆಯುತ್ತಿರುವ ಗುಂಪಿನಿಂದ ಥಳಿಸಿ ಹತ್ಯೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News