ನಾಲ್ವರು ವಿಪಕ್ಷ ಶಾಸಕರು ಬಿಜೆಪಿಗೆ ಸೇರ್ಪಡೆ

Update: 2019-07-31 17:52 GMT

ಮುಂಬೈ, ಜು.31: ಮಹಾರಾಷ್ಟ್ರದಲ್ಲಿ ವಿಪಕ್ಷಗಳ ಏಕತೆಗೆ ಮಾರಕ ಆಘಾತ ನೀಡಿರುವ ಎನ್‌ಸಿಪಿಯ ಮೂವರು ಹಾಗೂ ಕಾಂಗ್ರೆಸ್‌ನ ಒಬ್ಬ ಶಾಸಕ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಮರುದಿನ ಆಡಳಿತಾರೂಢ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.

ಶರದ್‌ ಪವಾರ್ ನೇತೃತ್ವದ ಎನ್‌ಸಿಪಿಯ ಶಿವೇಂದ್ರರಾಜೆ ಭೋಸಲೆ, ಸಂದೀಪ್ ನಾಕ್ ಮತ್ತು ವೈಭವ್ ಪಿಚಡ್, ಕಾಂಗ್ರೆಸ್‌ನ ಕಾಳಿದಾಸ್ ಕೊಲಂಬ್‌ಕರ್ ಮಂಗಳವಾರ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಬುಧವಾರ ಬೆಳಿಗ್ಗೆ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಚಂದ್ರಕಾಂತ್ ಪಾಟೀಲ್ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.

ಪಿಚಡ್ ಅವರ ತಂದೆ, ರಾಜ್ಯದ ಮಾಜಿ ಸಚಿವ ಮಧುಕರ್ ಪಿಚಡ್ ಅವರೂ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಗೊಂಡು ಈಗ ಮಹಾರಾಷ್ಟ್ರ ರಾಜ್ಯದ ವಸತಿ ಸಚಿವರಾಗಿರುವ ರಾಧಾಕೃಷ್ಣ ವಿಖೆ ಪಾಟೀಲ್ ಮತ್ತು ಮಧುಕರ್ ಪಿಚಡ್ ಆತ್ಮೀಯ ಗೆಳೆಯರಾಗಿದ್ದಾರೆ. ಸಂದೀಪ್ ನಾಯ್ಕ್ ಎನ್‌ಸಿಪಿಯ ಪ್ರಭಾವೀ ಮುಖಂಡ ಗಣೇಶ್ ನಾಯ್ಕ್ ಪುತ್ರ.

7ನೇ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಕಾಳಿದಾಸ್ ಕೊಲಂಬ್‌ಕರ್ ಮೊದಲು ಶಿವಸೇನೆಯಲ್ಲಿದ್ದು ಚುನಾವಣೆ ಸಂದರ್ಭ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದರು. 2014ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 122, ಶಿವಸೇನೆ 63, ಕಾಂಗ್ರೆಸ್ 42 ಮತ್ತು ಎನ್‌ಸಿಪಿ 41 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News