ಟಿಪ್ಪು ಜಯಂತಿ ವಿಚಾರದಲ್ಲಿ ಮಧ್ಯಪ್ರವೇಶಿಸುವುದಿಲ್ಲ: ಮುಸ್ಲಿಂ ಸೆಂಟ್ರಲ್ ಕಮಿಟಿ
ಮಂಗಳೂರು, ಆ.1: ಟಿಪ್ಪು ಜಯಂತಿ ಆಚರಣೆಯ ವಿಚಾರದಲ್ಲಿ ಮುಸ್ಲಿಂ ಸೆಂಟ್ರಲ್ ಕಮಿಟಿ ಮಧ್ಯಪ್ರವೇಶಿಸುವುದಿಲ್ಲ ಎಂದು ಕಮಿಟಿಯ ಅಧ್ಯಕ್ಷ ಮುಹಮ್ಮದ್ ಮಸೂದ್ ಸ್ಪಷ್ಪಡಿಸಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಕಾಂಗ್ರೆಸ್ ಸರಕಾರ ಟಿಪ್ಪು ಜಯಂತಿ ಜಾರಿಗೊಳಿಸಿತ್ತು. ಇದೀಗ ಬಿಜೆಪಿ ಸರಕಾರ ಅದನ್ನು ರದ್ದುಗೊಳಿಸಿದೆ. ಇದು ಬಿಜೆಪಿ ಮತ್ತು ಕಾಂಗ್ರೆಸ್ ಮುಖಂಡರು ಪಸ್ಪರ ಮುಖಾಮುಖಿಯಾಗಿ ಸೌಹಾರ್ದದಿಂದ ಬಗೆಹರಿಸಬೇಕಿದೆ. ಸೆಂಟ್ರಲ್ ಕಮಿಟಿಯು ಹಿಂದೂ ಮುಸ್ಲಿಂ ಸಮುದಾಯದ ಮಧ್ಯೆ ಸೌಹಾರ್ದವನ್ನು ಬಯಸುತ್ತದೆ. ಹಾಗಾಗಿ ಈ ವಿಚಾರದಲ್ಲಿ ಮಧ್ಯಪ್ರವೇಶಿಸುವುದಿಲ್ಲ. ಶಾಂತಿಗೆ ಧಕ್ಕೆಯಾಗದಂತೆ ಸೌಹಾರ್ದಯುತವಾಗಿ ಸಮಸ್ಯೆ ಮತ್ತು ಗೊಂದಲವನ್ನು ಬಗೆಹರಿಸಲು ಮುಂದಾಗ ಬೇಕಿದೆ ಎಂದು ಹೇಳಿದರು.
ತ್ರಿವಳಿ ತಲಾಖ್ ಕಾಯ್ದೆಗೆ ಸಂಬಂಧಿಸಿದಂತೆಯೂ ಕಮಿಟಿ ಪರವೂ ಇಲ್ಲ, ವಿರೋಧವೂ ಇಲ್ಲ. ಆದರೆ, ತ್ರಿವಳಿ ತಲಾಖ್‌ಗೆ ಯಾವುದೇ ಕಾನೂನಿನ ಅಗತ್ಯವಿಲ್ಲ. ಮುಸ್ಲಿಮರಿಗೆ ಈ ವಿಷಯದಲ್ಲಿ ಕುರ್‌ಆನ್-ಹದೀಸ್ ಕಾನೂನು ಆಗಿದೆ. ಇಂತಹ ಸಮಸ್ಯೆಗಳಾದಾಗ ಜಮಾಅತ್ ಕಮಿಟಿಯು ಸೌಹಾರ್ದಯುತವಾಗಿ ಬಗೆಹರಿಸಬೇಕು. ಅದಕ್ಕೆ ಇತರ ಮಧ್ಯಪ್ರವೇಶ ಅನಗತ್ಯ. ಸಂವಿಧಾನಕ್ಕೆ ಅನುಗುಣವಾಗಿ ಕೇಂದ್ರ ಮತ್ತು ರಾಜ್ಯ ಸರಕಾರ ಆಡಳಿತ ನಡೆಸುವ ಮೂಲದ ದೇಶದ ಪ್ರಜೆಗಳನ್ನು ಸಮಾನವಾಗಿ ಕಂಡರೆ ಸಾಕು ಎಂದು ಮುಹಮ್ಮದ್ ಮಸೂದ್ ಹೇಳಿದರು.