ಬಿಜೆಪಿಯ ಅಧಿಕಾರ ದಾಹಕ್ಕೆ ರಾಜ್ಯ ಸರಕಾರ ಬಲಿ: ಸೊರಕೆ
ಉಡುಪಿ, ಆ.1: ಇತ್ತೀಚಿನ ರಾಜಕೀಯ ಬೆಳವಣಿಗೆಯಲ್ಲಿ ಆಡಳಿತ ಪಕ್ಷದ ಶಾಸಕರನ್ನು ಕುದುರೆ ವ್ಯಾಪಾರದ ಮೂಲಕ ಖರೀದಿಸಿ, ಜನಾದೇಶ, ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೂಲ ಆಶಯಗಳಿಗೆ ತಿಲಾಂಜಲಿಯಿಟ್ಟು ವಾಮ ಮಾರ್ಗದ ಮೂಲಕ ಅಧಿಕಾರ ಪಡೆಯುವುದರೊಂದಿಗೆ ಬಿಜೆಪಿಯ ಅಧಿಕಾರ ದಾಹಕ್ಕೆ ರಾಜ್ಯ ಸರಕಾರ ಬಲಿಯಾಗಿದೆ ಎಂದು ಮಾಜಿ ಸಚಿವ ವಿಯ್ಕುಮಾರ್ ಸೊರಕೆ ಹೇಳಿದ್ದಾರೆ.
ಕಾಪು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕುರ್ಕಾಲು ಗ್ರಾಮೀಣ ಕಾಂಗ್ರೆಸ್ ಸಮಿತಿಯ ದೇವಪುತ್ರ ಕೋಟ್ಯಾನ್ ಅವರ ಮನೆಯಲ್ಲಿ ಬುಧವಾರ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡುತಿದ್ದರು. ಕಾಂಗ್ರೆಸ್ ಪಕ್ಷ ಬಲಿಷ್ಟ ಪಕ್ಷವಾಗಿದೆ, ಪಕ್ಷದ ಸಂಘಟನೆ ದೃಷ್ಟಿಯಿಂದ ಮಹಿಳೆಯರು ಮತ್ತು ಯುವಕರನ್ನು ಸೇರಿಸಿಕೊಂಡು ಪಕ್ಷ ಸಂಘಟಿಸಬೇಕಾದ ಅಗತ್ಯ ಇದೆ ಎಂದರು.
ಭ್ರಷ್ಟಾಚಾರ ಮಾಡಿ ಜೈಲಿಗೆ ಹೋಗಿ ಬಂದವರು ಈ ರಾಜ್ಯದ ಮುಖ್ಯ ಮಂತ್ರಿಯಾಗಿರುವುದು ರಾಜ್ಯದ ಜನತೆಯ ದೌರ್ಭಾಗ್ಯ. ಇತ್ತೀಚೆಗೆ ಜಿಲ್ಲೆ ಯಲ್ಲಿ ನಡೆದ ದಲಿತ ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಉಡುಪಿ ಜಿಲ್ಲೆಯ ಕೋಟದಲ್ಲಿ ನಡೆದ ಅವಳಿ ಕೊಲೆ ಪ್ರಕರಣದಲ್ಲಿ ಯಾವ ಪಕ್ಷದವರು ಭಾಗಿ ಯಾಗಿದ್ದಾರೆ ಎಂಬುದನ್ನು ಜನತೆ ತಿಳಿಯಬೇಕು. ಈ ಪ್ರಕರಣಗಳ ಬಗ್ಗೆ ಬಿಜೆಪಿ ಯ ಯಾವುದೇ ನಾಯಕರು ಕೂಡ ಯಾಕೆ ತುಟಿ ಬಿಚ್ಚುತಿತಿಲ್ಲ ಎಂದು ಪ್ರಶ್ನಿಸಿದರು.
ಮೊನ್ನೆ ಅನಿರೀಕ್ಷಿತವಾಗಿ ಸಾವಿಗೀಡಾದ ತನ್ನ ವಿದ್ಯಾರ್ಥಿ ಜೀವನದ ಸಹಪಾಠಿ ಹಾಗೂ ಕಾಫಿ ಉದ್ಯಮದ ಮೂಲಕ ಕರ್ನಾಟಕದ ಹೆಸರನ್ನು ವಿಶ್ವದೆಲ್ಲೆಡೆ ಪಸರಿಸಿದ ಖ್ಯಾತ ಉದ್ಯಮಿ ಕೆಫೆ ಕಾಫಿ ಡೇಯ ಸಂಸ್ಥಾಪಕ ವಿ.ಜಿ. ಸಿದ್ಧಾರ್ಥ ಇವರಿಗೆ ವೌನಪ್ರಾರ್ಥನೆಯೊಂದಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ನವೀನ್‌ಚಂದ್ರ ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಬ್ಲಾಕ್ ಉಪಾಧ್ಯಕ್ಷ ದೇವಪುತ್ರ ಕೋಟ್ಯಾನ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕುರ್ಕಾಲು ಗ್ರಾಪಂ ಅಧ್ಯಕ್ಷೆ ಶೋಭಾ ಸಾಲ್ಯಾನ್, ಗ್ರಾಮೀಣ ಸಮಿತಿ ಅಧ್ಯಕ್ಷ ಮಹೇಶ್ ಶೆಟ್ಟಿ, ಬ್ಲಾಕ್ ಪ್ರಧಾನ ಕಾರ್ಯದರ್ಶಿಗಳಾದ ಅಮೀರ್ ಮುಹಮ್ಮದ್, ಜಿತೇಂದ್ರ ಫುರ್ತಾದೋ, ದಿನೇಶ್ ಕೋಟ್ಯಾನ್, ಪ್ರಶಾಂತ್ ಜತ್ತನ್ನ, ದೀಪಕ್ ಎರ್ಮಾಳ್, ಸತೀಶ್ ದೇಜಾಡಿ, ಆಸಿಫ್ ಎರ್ಮಾಳ್, ಪ್ರಭಾಕರ್ ಆಚಾರ್ಯ, ಕಾರ್ತಿಕ್, ಪ್ರಭಾಕರ್ ಪಾಲನ್ ಮತ್ತು ಗ್ರಾಪಂ ಸದಸ್ಯರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಗ್ರಾಮೀಣ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಾಯನ್ ಫೆರ್ನಾಂಡಿಸ್ ವಂದಿಸಿದರು.