×
Ad

ಮಂಗಳೂರು ವಿಮಾನ ನಿಲ್ದಾಣ: ತಪಾಸಣೆ ನೆಪದಲ್ಲಿ ಯುವಕರನ್ನು ವಿವಸ್ತ್ರಗೊಳಿಸಿ ಹಿಂಸೆ ನೀಡಿದ ಆರೋಪ

Update: 2019-08-01 20:40 IST

ಮಂಗಳೂರು, ಆ.1: ಅಕ್ರಮವಾಗಿ ಚಿನ್ನ ಸಾಗಾಟ ಮಾಡಲಾಗುತ್ತದೆ ಎಂಬ ಆರೋಪದಲ್ಲಿ ಕಾಸರಗೋಡು ಮೂಲದ ಐವರು ಯುವಕರನ್ನು ತಪಾಸಣೆಯ ನೆಪದಲ್ಲಿ ಕಸ್ಟಮ್ಸ್ ಅಧಿಕಾರಿಗಳು ವಿವಸ್ತ್ರಗೊಳಿಸಿ ಮಾನಸಿಕ ಹಿಂಸೆ ನೀಡಿದ ಅಮಾನವೀಯ ಘಟನೆ ಬಜ್ಪೆ ವಿಮಾನ ನಿಲ್ದಾಣದಲ್ಲಿ ವಾರದ ಹಿಂದೆ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ.

ಕಾಸರಗೋಡು ಮೂಲದ ಸಈದ್ ನಾಯ್ಮರ್‌ಮೂಲೆ, ಲತೀಫ್ ಬಂದ್ಯೋಡ್, ಅಲ್ತಾಫ್, ಅಲ್ತಾಫ್ ಹಾಗೂ ಉಳ್ಳಾಲದ ನವಾಝ್ ಎಂಬವರು ಜು.27ರಂದು ಬೆಳಗ್ಗೆ 9:15ಕ್ಕೆ ದುಬೈಯಿಂದ ಬಜ್ಪೆ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದರು. ಈ ಸಂದರ್ಭ ಕಸ್ಟಮ್ಸ್ ಅಧಿಕಾರಿಗಳು ಅಕ್ರಮ ಚಿನ್ನ ಸಾಗಾಟದ ಗುಮಾನಿಯ ಮೇಲೆ ಈ ಐವರು ಯುವಕರನ್ನು ತಪಾಸಣೆಯ ನೆಪದಲ್ಲಿ ವಿವಸ್ತ್ರಗೊಳಿಸಿ ಮಾನಸಿಕ ಹಿಂಸೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.

ಕಸ್ಟಮ್ಸ್ ಅಧಿಕಾರಿಗಳು ಊರು ಮತ್ತು ಹೆಸರು ಕೇಳಿ ತಪಾಸಣೆ ನಡೆಸಿ ಅಕ್ರಮ ಚಿನ್ನ ತಂದಿರುವಿರಾ ಎಂದು ಕೇಳಿದರು. ನಾವು ಏನನ್ನೂ ತಂದಿಲ್ಲ. ಮನೆಯಲ್ಲಿ ವಿವಾಹ ಕಾರ್ಯಕ್ರಮವಿದ್ದ ಕಾರಣ ತುರ್ತಾಗಿ ಬಂದಿದ್ದೇವೆ ಎಂದು ಕೇಳಿದರೂ ಕಸ್ಟಮ್ಸ್ ಅಧಿಕಾರಿಗಳು ನಮ್ಮ ದಾಖಲೆ ಪತ್ರಗಳನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ಆರಂಭಿಸಿದರು. ಹಾಗೇ ಕೋಣೆಯೊಂದರಲ್ಲಿ ಕೂಡಿ ಹಾಕಿ ವಿವಸ್ತ್ರಗೊಳಿಸಿ ತಪಾಸಣೆಯ ನೆಪದಲ್ಲಿ ಕಾಲಹರಣ ಮಾಡಿದರು. ಬೆಳಗ್ಗೆ ವಿಮಾನ ನಿಲ್ದಾಣಕ್ಕೆ ಬಂದಿದ್ದ ನಮಗೆ ಮಧ್ಯಾಹ್ನವಾದರೂ ಊಟ ಕೊಡಲಿಲ್ಲ. ನಮ್ಮನ್ನು ಬರಮಾಡಿಕೊಳ್ಳಲು ಹೊರಗೆ ಕಾಯುತ್ತಿದ್ದ ಮನೆಯವರಿಗೂ ಮಾಹಿತಿ ಕೊಡಲಿಲ್ಲ. ಸಂಜೆಯ ವೇಳೆಗೆ ನಮಗೆ ಊಟ ಕೊಟ್ಟರೂ ನಾವದನ್ನು ಸ್ವೀಕರಿಸಲಿಲ್ಲ. ನಮ್ಮನ್ನು ಬಿಟ್ಟುಬಿಡಿ, ನಾವೇನನ್ನೂ ತಂದಿಲ್ಲ ಎಂದರೂ ಕೇಳಲಿಲ್ಲ. ಕೊನೆಗೆ ರಾತ್ರಿಯ ವೇಳೆಗೆ ನಮ್ಮನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ರಾತ್ರಿ 1:30ರ ವೇಳೆಗೆ ಬಿಟ್ಟುಕೊಟ್ಟರು. ನನ್ನ ನಾದಿನಿಯ ವಿವಾಹವು ಅಂದಿತ್ತು. ಅದಕ್ಕೂ ಹೋಗಲು ನಮಗೆ ಆಗಲಿಲ್ಲ ಎಂದು ಸಈದ್ ನಾಯ್ಮರ್‌ ಮೂಲೆ ತಿಳಿಸಿದ್ದಾರೆ.

ನಮಗೆ ಮಾತ್ರವಲ್ಲ, ನಮ್ಮನ್ನು ಬರಮಾಡಿಕೊಳ್ಳಲು ಬಂದವರಿಗೂ ಅಂದಿನ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಲಿಲ್ಲ. ನಮಗಾದ ಅನ್ಯಾಯ ತಿಳಿದು ಮದುವೆ ಮನೆಯಲ್ಲಿ ಸಂಭ್ರಮದ ಬದಲು ನೀರವ ಮೌನ ಆವರಿಸಿತ್ತು. ನಿರಂತರ 18 ಗಂಟೆಗಳ ಕಾಲ ನಾವು ತಪಾಸಣೆಯ ನೆಪದಲ್ಲಿ ಪೀಡನೆಗೊಳಗಾದೆವು. ನಾವು ಮುಸ್ಲಿಮರು, ಮಲಯಾಳಿಗಳು ಎಂಬ ಕಾರಣಕ್ಕೆ ಈ ರೀತಿಯ ಮಾನಸಿಕ ಹಿಂಸೆ ನೀಡಲಾಗಿದೆ. ಇದರ ವಿರುದ್ಧ ನಾವು ನ್ಯಾಯಾಲಯಕ್ಕೆ ಖಾಸಗಿ ದೂರು ನೀಡಲು ನಿರ್ಧರಿಸಿದ್ದೇವೆ. ಕೇರಳ ಸರಕಾರ ಮತ್ತು ಸಂಘಟನೆಗಳ ನೆರವನ್ನು ನಾವು ನಿರೀಕ್ಷಿಸುತ್ತೇವೆ. ಕಸ್ಟಮ್ಸ್ ಅಧಿಕಾರಿಗಳ ದೌರ್ಜನ್ಯ, ದಬ್ಬಾಳಿಕೆಗೆ ಅಂತ್ಯ ಹಾಕಬೇಕಿದೆ ಎಂದು ಸಈದ್ ನಾಯ್ಮರ್‌ಮೂಲೆ ತಿಳಿಸಿದ್ದಾರೆ.

ನಿಯಮಾನುಸಾರ ತನಿಖೆ ನಡೆಸಿದ್ದೇವೆ ಕಿರುಕುಳ ನೀಡಿಲ್ಲ: ಕಸ್ಟಮ್ಸ್ ಅಧಿಕಾರಿ

ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಾಸರಗೋಡಿನ ಮೂವರು ಪ್ರಯಾಣಿಕರು ಕಸ್ಟಮ್ಸ್ ಅಧಿಕಾರಿಗಳಿಂದ ಕಿರುಕುಳ ಅನುಭವಿಸಿರುವ ದೂರಿನ ಬಗ್ಗೆ ಮಂಗಳೂರು ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಯನ್ನು ಮಾತನಾಡಿಸಿದಾಗ ಅವರು ನೀಡಿದ ಹೇಳಿಕೆಯ ಪ್ರಕಾರ, "ಶನಿವಾರ ಮಂಗಳೂರು ವಿಮಾ ನಿಲ್ದಾಣದಲ್ಲಿ ಇತರ ಪ್ರಯಾಣಿಕರನ್ನು ತಪಾಸಣೆ ಮಾಡುವ ರೀತಿಯಲ್ಲಿ (ಕಾಸರಗೋಡಿನ ಮೂವರು ಪ್ರಯಾಣಿಕರನ್ನು) ಅವರನ್ನು ತಪಾಸಣೆ ಮಾಡಿದಾಗ ನಮ್ಮ ಮೆಟಲ್ ಡಿಟೆಕ್ಟರ್ ನಲ್ಲಿ ಬೀಪ್ (ಶಬ್ಧ) ಬಂತು. ಮೇಲ್ನೋಟಕ್ಕೆ ಪತ್ತೆ ಹಚ್ಚಲು ಸಾಧ್ಯ ವಾಗಿಲ್ಲ. ಇತ್ತೀಚೆಗೆ ದೇಹದೊಳಗೆ ವಸ್ತುಗಳನ್ನು ಅವತಿಟ್ಟುಕೊಂಡು ಕೆಲವು ಪ್ರಯಾಣಿಕರು ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚಿನ ತನಿಖೆ ಮಾಡಬೇಕಾಯಿತು. ನಿಯಮಾನುಸಾರ ಮ್ಯಾಜಿಸ್ಟ್ರೇಟ್ ರ ಅನುಮತಿ ಪಡೆಯ ಬೇಕಾಗಿತ್ತು. ಈ ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವಾಗ ವಿಳಂಬವಾಗಿದೆ. ಪ್ರಕರಣದ ತನಿಖೆಯನ್ನು ಕಾನೂನು ಪ್ರಕಾರ ಸಂಬಂಧ ಪಟ್ಟವರ ಗಮನಕ್ಕೆ ತಂದು ನಡೆಸಿದ್ದೇವೆ" ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News