ಶಿಕ್ಷಕ ವೃತ್ತಿಯು ಸೇವಾ ಮನೋಭಾವದಿಂದ ಕೂಡಿರಲಿ: ಯಡಪಡಿತ್ತಾಯ
ಮಂಗಳೂರು, ಆ.1: ಶಿಕ್ಷಕ ವೃತ್ತಿಯನ್ನು ‘ಕೆಲಸ’ ಎಂಬ ನೆಲೆಯಲ್ಲಿ ಪರಿಗಣಿಸದೆ ಸೇವಾ ಮನೋಭಾವದಿಂದ ಕಾಣಬೇಕು. ಈ ಬಗ್ಗೆ ಶಿಕ್ಷಕರಲ್ಲಿ ಜಾಗೃತ ಮೂಡಿದಾಗ ಸದೃಢ ಸಮಾಜ ನಿರ್ಮಾಣ ಮಾಡಲು ಸಾಧ್ಯವಿದೆ ಎಂದು ಮಂಗಳೂರು ವಿ.ವಿ. ಕುಲಪತಿ ಪ್ರೊ. ಪಿ.ಎಸ್. ಯಡಪಡಿತ್ತಾಯ ಅಭಿಪ್ರಾಯಪಟ್ಟರು.
ದ.ಕ. ಜಿಲ್ಲಾ ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಹಾಗೂ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘದ ಆಶ್ರಯದಲ್ಲಿ ನಗರದ ಸೈಂಟ್ ಆ್ಯನ್ಸ್ ಪ್ರೌಢಶಾಲಾ ಸಭಾಭವನದಲ್ಲಿ ಗುರುವಾರ ನಡೆದ ‘ಶೈಕ್ಷಣಿಕ ಸಮಾವೇಶ’ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆಯಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರು ಈ ನಿಟ್ಟಿನಲ್ಲಿ ವಿಶೇಷ ಜವಾಬ್ದಾರಿ ಹೊತ್ತಿದ್ದಾರೆ. ವಿದ್ಯಾರ್ಥಿಯ ಶಾರೀರಿಕ, ಮಾನಸಿಕ, ಬೌದ್ಧಿಕ ಬೆಳವಣಿಗೆ, ಸಾಮಾಜಿಕ ಸ್ವಸ್ಥ್ಯ ಹಾಗೂ ಆಧ್ಯಾತ್ಮಿಕ ವಿಚಾರಗಳೆಂಬ ಪಂಚ ಸೂತ್ರಗಳು ಶಿಕ್ಷಕರ ಮೂಲಕ ದೊರೆತರೆ ಪರಿಪೂರ್ಣ ವ್ಯಕ್ತಿತ್ವ ಹೊಂದಲು ಸಾಧ್ಯ ಎಂದು ಪ್ರೊ. ಪಿ.ಎಸ್. ಯಡಪಡಿತ್ತಾಯ ಹೇಳಿದರು.
ಮಂಗಳೂರು ವಿಶ್ವವಿದ್ಯಾನಿಲಯವು ಎಲ್ಲಾ ರೀತಿಯ ದುಂದುವೆಚ್ಚಗಳಿಗೆ ಮುಂದಿನ ದಿನಗಳಿಗೆ ಕಡಿವಾಣ ಹಾಕಲು ಉದ್ದೇಶಿಸಿದೆ. ವಿ.ವಿ. ವ್ಯಾಪ್ತಿಯಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಪೂರಕವಾಗುವ ನೆಲೆಯಲ್ಲಿ ವಿವಿಧ ಬದಲಾವಣೆಗಳನ್ನು ಮಾಡಲು ಚಿಂತನೆ ನಡೆಸಲಾಗಿದೆ. ಶಿಕ್ಷಣದ ಕರಡು ನೀತಿ ಜಾರಿಗೊಳ್ಳುತ್ತಿದ್ದು, ಇದರ ಬಗ್ಗೆ ಅಧ್ಯಾಪಕರು ತಿಳುವಳಿಕೆ ಪಡೆಯಬೇಕು ಎಂದು ಪ್ರೊ. ಪಿ.ಎಸ್. ಯಡಪಡಿತ್ತಾಯ ನುಡಿದರು.
ಸೈಂಟ್ ಆ್ಯನ್ಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಮರಿಯಾ ಕೃಪ ಎ.ಸಿ. ಅಧ್ಯಕ್ಷತೆ ವಹಿಸಿದ್ದರು. ಬೆಳ್ತಂಗಡಿಯ ಕ್ಷೇತ್ರ ಶಿಕ್ಷಣಾಧಿಕಾರಿ ಸತೀಶ್ ಪಿ, ಸಂಘದ ಅಧ್ಯಕ್ಷೆ ಜಯಶ್ರೀ ಜಿ.ಎಸ್, ಕಾರ್ಯದರ್ಶಿ ಮಹೇಶ್ ಶೆಟ್ಟಿ, ಉಪಾಧ್ಯಕ್ಷ ಕೆಎಂಕೆ ಮಂಜನಾಡಿ ಉಪಸ್ಥಿತರಿದ್ದರು.