×
Ad

ಒಂದೇ ದೇಶ ಒಂದೇ ಶಿಕ್ಷಣ ಜಾರಿಗಾಗಿ ಧರಣಿ

Update: 2019-08-01 22:02 IST

ಬಂಟ್ವಾಳ, ಆ. 1: ಸರಕಾರಿ ಶಾಲೆ ಉಳಿಸಿ ಬೆಳೆಸಿ ರಾಜ್ಯ ಸಮಿತಿ ಹಾಗೂ ಶ್ರೀ ದುರ್ಗಾ ಚಾರಿಟೇಬಲ್ ಟ್ರಸ್ಟ್ ಜಂಟಿ ಆಶ್ರಯದಲ್ಲಿ ಒಂದೇ ದೇಶ ಒಂದೇ ಶಿಕ್ಷಣ ಜಾರಿಗಾಗಿ ಬೃಹತ್ ಧರಣಿ ಸತ್ಯಾಗ್ರಹ ಹಾಗೂ ಭಾರತ ಶಿಕ್ಷಣ ರಥಯಾತ್ರೆಯ ಸಮಾರೋಪ ದೆಹಲಿಯ ಜಂತರ್ ಮಂತರ್ ನಲ್ಲಿ ಗುರುವಾರ  ನಡೆಯಿತು.

ಧರಣಿ ಸತ್ಯಾಗ್ರಹವನ್ನು ಉದ್ದೇಶಿಸಿ ಮಂಗಳೂರು ಸಂಸದ ನಳೀನ್ ಕುಮಾರ್ ಕಟೀಲ್ ಮಾತನಾಡಿ, ಬಂಟ್ವಾಳದ ಯುವಕರ ತಂಡವೊಂದು ಆದರ್ಶ ಶಾಲೆಯನ್ನು ನಿರ್ಮಿಸಿ, ಜಿಲ್ಲೆಯಲ್ಲಿ ಸರಕಾರಿ ಶಾಲೆಯನ್ನು ಉಳಿಸುವ ಪ್ರಯತ್ನ ನಡೆಸಿ ದೇಶಾದ್ಯಂತ ಎಲ್ಲರಿಗೂ ಸಮಾನ ಶಿಕ್ಷಣ ಸಿಗಬೇಕೆಂಬ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದಿಂದ  ದೆಹಲಿಗೆ ಬಂದು ಹೋರಾಟ ನಡೆಸುತ್ತಿರುವುದು ಅಭಿನಂದನೀಯ. ದೇಶದಲ್ಲಿ ಹೊಸ ಶಿಕ್ಷಣ ನೀತಿ ಜಾರಿ ಬರುತ್ತಿರುವ ಈ ಸಂದರ್ಭದಲ್ಲಿ ಪ್ರಕಾಶ್ ಅಂಚನ್ ನೇತೃತ್ವದ ತಂಡ ಸಮಾನ ಶಿಕ್ಷಣ ಜಾರಿಗಾಗಿ ಭಾರತ ಶಿಕ್ಷಣ ರಥಯಾತ್ರೆ ನಡೆಸಿರುವುದು ಅರ್ಥಪೂರ್ಣವಾಗಿದ್ದು,  ಇದು ಪ್ರಧಾನ ಮಂತ್ರಿಯ ಆಶಯಕ್ಕೂ ಬೆಂಗಲಾವಾಗಿದೆ ಎಂದರು.

ಮೈಸೂರು- ಕೊಡಗು ಸಂಸದ ಪ್ರತಾಪ್ ಸಿಂಹ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದು, ಕೇಂದ್ರ ಸರಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ.  ಒಂದೇ ಶಿಕ್ಷಣ ನೀತಿ ಜಾರಿ ಬಂದರೆ ಎಲ್ಲರಿಗೂ ಉಪಯೋಗವಾಗಲಿದೆ ಎಂದರು.
ಬೀದರ್ ಸಂಸದ ಭಗವಾನ್ ಕೂಬಾ ಧರಣಿಯಲ್ಲಿ ಪಾಲ್ಗೊಂಡರು.

ಭಾರತ ರಥಯಾತ್ರೆಯ ರುವಾರಿ ಪ್ರಕಾಶ್ ಅಂಚನ್ ಮಾತನಾಡಿ, ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ, ಸರಕಾರಿ ಶಾಲೆಗಳ  ಉಳಿವಿಗಾಗಿ, ಎಲ್ಲ ರಾಜ್ಯಗಳ ಮಾತೃಭಾಷೆಯೊಂದಿಗೆ ಇಂಗ್ಲಿಷ್ ಹಾಗೂ ಹಿಂದಿ ಭಾಷೆ ಕಲಿಕೆಗೆ ಅವಕಾಶ ನೀಡಬೇಕೆಂದು ಆಗ್ರಹಿಸಿ ಭಾರತ ರಥಯಾತ್ರೆಯನ್ನು ನಡೆಸಲಾಗಿದೆ. ದೇಶದಲ್ಲಿ ಬಡವರಿಗೊಂದು ಶಿಕ್ಷಣ ಶ್ರೀಮಂತರಿಗೊಂದು ಶಿಕ್ಷಣ ಎನ್ನುವ ತಾರತಮ್ಯ ಇದೆ. ಅದು ನಿವಾರಣೆಯಾಗಿ ಎಲ್ಲರಿಗೂ ಸಮಾನ ಶಿಕ್ಷಣ ಸಿಗಬೇಕು ಎಂದು ತಿಳಿಸಿದರು.

ಸರಕಾರಿ ಶಾಲೆ ಉಳಿಸಿ ಬೆಳೆಸಿ ರಾಜ್ಯ ಸಮಿತಿಯ ಕಾರ್ಯದರ್ಶಿ ಪುರುಷೋತ್ತಮ ಅಂಚನ್, ಕೋಶಾಧಿಕಾರಿ ಸಂದೀಪ್ ಸಾಲ್ಯಾನ್, ಉಪಾಧ್ಯಕ್ಷ ಮಯೂರ್ ಕೀರ್ತಿ, ಸದಸ್ಯರಾದ  ರಾಮಚಂದ್ರ ಪೂಜಾರಿ, ಸಂತೋಷ್ ಕಟ್ಟೆ, ನವೀನ್ ಸೇಸಗುರಿ, ಉದಯ, ದಿಲೀಪ್ ಡೆಚ್ಚಾರ್, ಪ್ರವೀಣ ಅಲಂಗಾರು,  ದೀಪಕ್ ಸಾಲ್ಯಾನ್, ಸುರೇಶ್, ಚಂದ್ರಶೇಖರ, ಅರ್ಜುನ್, ಜೇಸಿಐ ಬಂಟ್ವಾಳದ ಅಧ್ಯಕ್ಷ ಯತೀಶ್ ಕರ್ಕೆರಾ, ಸದಸ್ಯರಾದ ಸದಾನಂದ ಬಂಗೇರಾ, ಲೋಕೇಶ್ ಸುವರ್ಣ, ತಾಪಂ ಸದಸ್ಯ ಗಣೇಶ್ ಸುವರ್ಣ, ಭುವನೇಶ್ ಪಚ್ಚಿನಡ್ಕ, ಶಿವಪ್ರಸಾದ ಅಜಿಲರು, ದೇವದಾಸ್ ಸಾಲ್ಯಾನ್, ಪೂರ್ಣೇಶ್, ಮೋಹನ್ ಚೌದರಿ, ಸಾಂಗ್ ಸಿಂಗ್,  ರಮನಾಥ ರಾಯಿ, ಸಂತೋಷ್ ರಾಯಿ ಬೆಟ್ಟು, ಸುರೇಶ್ ಕೋಟ್ಯಾನ್, ಸತೀಶ್ ಜಕ್ರಿಬೆಟ್ಟು, ಅಶೋಕ್ ಚಿಕ್ಕಾಬಳ್ಳಾಪುರ, ಪ್ರಕಾಶ್, ಜಯಕೀರ್ತಿ, ನಾರಾಯಣ, ವಿಶಾಲ್ ಪ್ರಕಾಶ್ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಜೇಸಿಐ ಬಂಟ್ವಾಳ ಹಿಂದೂ ಯುವ  ಶಕ್ತಿ ಆಲಡ್ಕ, ನೇತಾಜಿ ಫೌಂಡೇಶನ್ ಚಿಕ್ಕಬಳ್ಳಾಪುರ  ಬೆಂಬಲ ವ್ಯಕ್ತಪಡಿಸಿ ಧರಣಿಯಲ್ಲಿ ಪಾಲ್ಗೊಂಡರು.
ದೇಶಾದ್ಯಂತ ಮಾತೃಭಾಷೆಯೊಂದಿಗೆ ಇಂಗ್ಲಿಷ್ ಹಾಗೂ ಹಿಂದಿ ಶಿಕ್ಷಣವನ್ನು  ಕಡ್ಡಾಯವಾಗಿ ನೀಡಬೇಕು. ಒಂದರಿಂದ ಹನ್ನೆರಡನೇ ತರಗತಿವರೆಗೆ ಉಚಿತ ಕಡ್ಡಾಯ ಶಿಕ್ಷಣ ನೀಡಬೇಕು. ಸಮಾನ ಶುಲ್ಕ ಹಾಗೂ ಶಿಕ್ಷಣ  ಜಾರಿಗೊಳಿಸಬೇಕು. ಪ್ರತಿ ರಾಜ್ಯದಲ್ಲೂ ಶಿಕ್ಷಣಕ್ಕಾಗಿ ಶೇ. 25 ಅನುದಾನವನ್ನು ಬಜೆಟ್ ನಲ್ಲಿ ಮೀಸಲಿಡಬೇಕು ಎನ್ನುವ ಬೇಡಿಕೆಯನ್ನು ಕೇಂದ್ರ ಮಾನವ ಸಂಪನ್ಮೂಲ ಖಾತೆ ಸಚಿವ ರಮೇಶ್ ಪೋಕ್ರಿಯಾಲ್ ಅವರಿಗೆ ಸಲ್ಲಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News