ಕುವೈತ್‌ನ 14 ಸಂತ್ರಸ್ತರಿಗೆ ಪಾಸ್‌ಪೋರ್ಟ್ ಹಸ್ತಾಂತರ: ಆ.4ರಂದು ಸ್ವದೇಶಕ್ಕೆ ವಾಪಸ್
ಮಂಗಳೂರು, ಆ.1: ಉದ್ಯೋಗಕ್ಕೆಂದು ಕುವೈತ್‌ಗೆ ತೆರಳಿ ವಂಚನೆಗೊಳಗಾಗಿದ್ದ ಕರಾವಳಿಯ 34 ಮಂದಿ ಪೈಕಿ ಕೊನೆಯಲ್ಲಿ ಉಳಿದುಕೊಂಡ 14 ಮಂದಿಗೆ ಗುರುವಾರ ಪಾಸ್‌ಪೋರ್ಟ್ ಹಸ್ತಾಂತರಿಸಲಾಗಿದೆ. ಇವರೆಲ್ಲ ಆ.4ರಂದು ಕುವೈತ್‌ನಿಂದ ಸ್ವದೇಶಕ್ಕೆ ಮರಳಲಿದ್ದಾರೆ.
ಈ ಮೂಲಕ ಅತಂತ್ರಗೊಂಡಿದ್ದ ಸಂತ್ರಸ್ತರು ನಿಟ್ಟುಸಿರು ಬಿಡುವಂತಾಗಿದೆ.
ದುಡಿಮೆಯೂ ಇಲ್ಲದೆ, ತವರಿಗೆ ವಾಪಸಾಗಲೂ ಸಾಧ್ಯವಾಗದೆ ವಿದೇಶದಲ್ಲೇ ಸಂಕಷ್ಟಕ್ಕೊಳಗಾದವರ ಪೈಕಿ ಇತರ 23 ಮಂದಿ ಹಂತ-ಹಂತಗಳಲ್ಲಿ ಅನಿವಾಸಿ ಭಾರತೀಯರ ನೆರವಿನಲ್ಲಿ ಸ್ವದೇಶಕ್ಕೆ ವಾಪಸಾಗಿದ್ದರು ಎಂದು ಅನಿವಾಸಿ ಭಾರತೀಯ ಇಂಜಿನಿಯರ್ ಮೋಹನದಾಸ್ ಕಾಮತ್ ತಿಳಿಸಿದ್ದಾರೆ.
ಆದರೆ ಉದ್ಯೋಗ ನೀಡಿದ ಕಂಪೆನಿಯು ಸೊತ್ತುಗಳನ್ನು ಮರಳಿಸದ ಆರೋಪದಲ್ಲಿ ವೀಸಾ ರದ್ದತಿ ಹಾಗೂ ಪಾಸ್‌ಪೋರ್ಟ್ ಮರಳಿಸಲು ನಿರಾಕರಿಸಿತ್ತು. ಕೊನೆಗೂ ಭಾರತೀಯ ರಾಯಭಾರಿ ಕಚೇರಿ ಹಾಗೂ ಅನಿವಾಸಿ ಭಾರತೀಯ ಉದ್ಯಮಿಗಳ ಪ್ರಯತ್ನದ ಫಲವಾಗಿ ಬಾಕಿಯುಳಿದ 14 ಮಂದಿ ಸ್ವದೇಶಕ್ಕೆ ವಾಪಸಾಗಲಿದ್ದಾರೆ ಎಂದರು.
ಕುವೈತ್‌ನಲ್ಲಿರುವ 14 ಸಂತ್ರಸ್ತರ ಪೈಕಿ 11 ಮಂದಿಯ ದಂಡ ಹಾಗೂ ಟಿಕೆಟ್ ಮೊತ್ತವನ್ನು ಕುವೈತ್‌ನ ಭಾರತೀಯ ಪ್ರವಾಸಿ ಪರಿಷತ್ ಹಾಗೂ ಕೇರಳ ಮುಸ್ಲಿಂ ಅಸೋಸಿಯೇಶನ್‌ನ ಕರ್ನಾಟಕ ಘಟಕ (ಕೆಕೆಎಂಎ) ಭರಿಸಿದೆ. ಉಳಿದ ಮೂರು ಮಂದಿ ತಮಿಳುನಾಡಿನವರಾಗಿದ್ದು, ಅವರ ದಂಡ ಹಾಗೂ ಟಿಕೆಟ್ ವೆಚ್ಚವನ್ನು ಉದ್ಯಮಿ ಇಳಂಗೋವನ್ ಪಾವತಿಸಿದ್ದಾರೆ. ಇವರೆಲ್ಲರೂ ಆ.4ರಂದು ರಾತ್ರಿ 8:30ಕ್ಕೆ ಕುವೈತ್‌ನಿಂದ ವಿಮಾನ ಮೂಲಕ ಮರುದಿನ ಮುಂಬೈಗೆ ಆಗಮಿಸುವರು. ಇವರಲ್ಲಿ ಮಂಗಳೂರಿನ ಎಂಟು ಮಂದಿ ಮುಂಬೈನಿಂದ ಬಸ್ ಮೂಲಕ ಬರಲಿದ್ದಾರೆ ಎಂದು ಮೋಹನದಾಸ್ ಕಾಮತ್ ತಿಳಿಸಿದ್ದಾರೆ.