ಪರಿಪೂರ್ಣ ವಿವಿಗೆ ಸಾಂಪ್ರದಾಯಿಕ ಕಲಾಪ್ರಕಾರಗಳು ಬೇಕು: ಡಾ.ವಿನೋದ್ ಭಟ್
ಉಡುಪಿ, ಆ.1: ವಿಶ್ವವಿದ್ಯಾಲಯವೊಂದು ಪರಿಪೂರ್ಣ ಎನಿಸಿಕೊಳ್ಳಲು ಕೇವಲ ತಂತ್ರಜ್ಞಾನ ಹಾಗೂ ಆರೋಗ್ಯ ವಿಜ್ಞಾನ ಕೋರ್ಸುಗಳು ಸಾಕಾಗುವುದಿಲ್ಲ. ಇದರೊಂದಿಗೆ ಜ್ಞಾನ ಶಾಖೆಗಳಲ್ಲಿ ಸಾಂಪ್ರದಾಯಿಕ ಕಲಾ ಪ್ರಕಾರಗಳೂ ಇರಬೇಕಾಗುತ್ತದೆ ಎಂದು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ)ನ ಕುಲಪತಿ ಡಾ.ಎಚ್.ವಿನೋದ ಭಟ್ ಅಭಿಪ್ರಾಯಪಟ್ಟಿದ್ದಾರೆ.
ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲೋಸಾಫಿಕಲ್ ಆರ್ಟ್ಸ್ ಆ್ಯಂಡ್ ಸೈನ್ಸಸ್‌ನಲ್ಲಿ ಪ್ರಾರಂಭಿಸಲಾದ ನೂತನವಾದ ಇಕೋಸೊಫಿಕಲ್ ಆಸ್ತೆಟಿಕ್ಸ್ ಎಂಎ ಕೋರ್ಸ್‌ನ್ನು ಗುರುವಾರ ಉದ್ಘಾಟಿಸಿ ಮಾತನಾಡಿದ ಡಾ.ಭಟ್, ಯುನಿವರ್ಸಿಟಿ (ವಿಶ್ವವಿದ್ಯಾಲಯ) ಶಬ್ದ ಬಂದುದೇ ಯುನವರ್ಸಲಿಸಮ್‌ನಿಂದ. ಹೀಗಾಗಿ ಯಾವುದೇ ವಿ.ವಿ. ಸಾಂಪ್ರದಾಯಿಕ ಕಲಾ ಶಾಖೆಗಳಿಲ್ಲದೇ ಪರಿಪೂರ್ಣಗೊಳ್ಳುವುದಿಲ್ಲ ಎಂದರು.
ಇದನ್ನು ದೃಷ್ಟಿಯಲ್ಲಿಟ್ಟುಕೊಂಡು ಮಾಹೆ ವಿವಿಧ ಕಲಾಪ್ರಕಾರದ ಕಲಿಕೆಗೆ ಉತ್ತೇಜನ ನೀಡುತಿದ್ದು, ಈ ದಿಶೆಯಲ್ಲಿ ಇದೀಗ ಪ್ರಾರಂಭಿಸಿರುವ ಎಕೋಸೋಫಿಕಲ್ ಆಸ್ತೆಟಿಕ್ಸ್ ಒಂದು ಹೆಜ್ಜೆ. ಇದೊಂದು ಭಿನ್ನವಾದ, ವಿಶಿಷ್ಟ ಕೋರ್ಸ್ ಆಗಿದ್ದು, ಇದರಲ್ಲಿ ಕಲಾವಿಭಾಗದ ಪರಿಸರ, ತತ್ತ್ವಶಾಸ್ತ್ರ, ಮಾಧ್ಯಮ ಹೀಗೆ ವಿವಿಧ ಶಿಸ್ತಿನ ವಿಷಯಗಳೂ ಒಳಗೊಂಡಿವೆ. ಇದನ್ನು ವಿದ್ಯಾರ್ಥಿಗಳು ಬಳಸಿಕೊಳ್ಳಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕೇಂದ್ರದ ನಿರ್ದೇಶಕ ಪ್ರೊ.ವರದೇಶ ಹಿರೆಗಂಗೆ ಹೊಸ ಕೋರ್ಸಿನ ಕುರಿತು ವಿವರವಾಗಿ ತಿಳಿಸಿ ಇದು ದಂತಗೋಪುರ ದೊಳಗಿನ ತತ್ವಶಾಸ್ತ್ರವಲ್ಲ ಎಂದರು. ಭ್ರಾಮರಿ ಶಿವಪ್ರಕಾಶ್ ವಂದಿಸಿದರು. ಸುಶ್ಮಿತಾ ಕಾರ್ಯಕ್ರಮ ನಿರ್ವಹಿಸಿದರು.