×
Ad

ಕುಂದಾಪ್ರ ಕನ್ನಡ ಉದ್ಯಮದ ಭಾಷೆಯಲ್ಲ, ಬದುಕಿನ ಭಾಷೆ: ಪ್ರೊ.ಶೆಟ್ಟಿ

Update: 2019-08-01 22:43 IST

ಉಡುಪಿ, ಆ.1: ಕನ್ನಡದ ಮೂಲ ಕಂಪನ್ನು ಒಳಗೊಂಡಿರುವ ಕುಂದಾಪ್ರ ಕನ್ನಡ ಭಾಷೆ ಮಾತನಾಡಲು ಅಹಂ ಬಿಡಬೇಕು. ಇದು ಬದುಕಿನ ಭಾಷೆಯೇ ಹೊರತು ಉದ್ಯಮದ ಭಾಷೆಯಲ್ಲ. ಹೀಗಾಗಿ ಇಂದಿಗೂ ಕುಂದಾಪ್ರ ಭಾಷೆ ಜೀವಂತವಾಗಿದೆ ಎಂದು ಎಂಜಿಎಂ ಕಾಲೇಜಿನ ರಾಜ್ಯಶಾಸ ವಿಭಾಗ ಮುಖ್ಯಸ್ಥ ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ತಿಳಿಸಿದ್ದಾರೆ.

ಎಂಜಿಎಂ ಕಾಲೇಜಿನ ಕನ್ನಡ ವಿಭಾಗ ಹಾಗೂ ಪತ್ರಿಕೋದ್ಯಮ ವಿಭಾಗದ ಜಂಟಿ ಸಹಯೋಗದಲ್ಲಿ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾವಹಿಸಿ ಅವರು ಮಾತನಾಡುತಿದ್ದರು.
ಕನ್ನಡ ಭಾಷೆ ಉಳಿವಿಗೆ ಕುಂದಾಪುರ ಕನ್ನಡದ ಕೊಡುಗೆ ಬಹಳಷ್ಟಿದೆ. ಇಡೀ ಕನ್ನಡ ಸಾಮ್ರಾಜ್ಯವೇ ಕುಂದಾಪುರದಲ್ಲಿತ್ತು. ಇದು ಕನ್ನಡದ ಸಮೃದ್ಧ ಭಾಷೆ. ಈ ಮಣ್ಣಿನಲ್ಲಿ ವಿಶೇಷ ಗುಣವಿದ್ದು, ಡಾ. ಶಿವರಾಮ ಕಾರಂತರ ಮೂಕಜ್ಜಿ ಕನಸಿಗೆ ಜ್ಞಾನಪೀಠ ಪ್ರಶಸ್ತಿ ಬಂದಿದೆ. ಈ ಭಾಷೆಯನ್ನು ಉಳಿಸಿಕೊಳ್ಳಬೇಕಾದ ಅಗತ್ಯವಿದೆ ಎಂದರು.

ಭಾಷೆಯ ಬೆಳವಣಿಗೆಗೆ ಅಕಾಡೆಮಿ ಅನಿವಾರ್ಯವಲ್ಲ. ತುಳು ಸೇರಿದಂತೆ ಇತರೆ ಭಾಷೆ ಹಾಗೂ ಕಲೆಗಳಿಗೆ ಅಕಾಡೆಮಿ ಸ್ಥಾಪನೆ ಮಾಡಿದ್ದರೂ ನಿರೀಕ್ಷಿತ ಅಭಿವೃದ್ಧಿ ಕಾಣಲಿಲ್ಲ. ಅದಕ್ಕಾಗಿ ನಮ್ಮ ಮಕ್ಕಳಿಗೆ ಮೊದಲು ಭಾಷೆ ಕಲಿಸಿ, ನಂತರ ಅಕ್ಷರ ಅಭ್ಯಾಸ ಮಾಡಿಸಬೇಕು. ಭಾಷೆಯೊಂದು ಶುದ್ಧತೆ, ಮತ್ತು ಬದ್ಧತೆಯಿದ್ದಾಗ ಉಳಿಯುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಜಿ. ವಿಜಯ ಮಾತನಾಡಿ, ಭಾಷೆ ಎನ್ನುವುದು ಆಯಾ ಪ್ರದೇಶಕ್ಕೆ ಸಂಬಂಧಿಸಿದ್ದು. ಪ್ರತಿ ಶಬ್ದಗಳಲ್ಲಿ ಕಾಣಿಸಿಕೊಳ್ಳುತ್ತದೆ. ನಾವು ಎಷ್ಟೇ ದೊಡ್ಡ ವ್ಯಕ್ತಿಗಳಾದರೂ ಮಾತೃ ಭಾಷೆ ಹಾಗೂ ಮನೆಯ ಮೂಲ ಭಾಷೆಯನ್ನು ಮರೆಯಬಾರದು. ನಮ್ಮ ಭಾಷೆಯ ಮಹತ್ವ ತಿಳಿದುಕೊಂಡು ಪ್ರತಿಯೊಬ್ಬರೂ ವ್ಯವಹರಿಸಬೇಕೆಂದು ಕಿವಿಮಾತು ಹೇಳಿದರು.

ಹಾಲೆ ಮರದ ಕೆತ್ತೆ ಗುದ್ದುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸ ಲಾಯಿತು. ವೇದಿಕೆ ಮೇಲಿದ್ದ ಗಣ್ಯರಿಗೆ ಮುಟ್ಟಾಳೆ ತಲೆಗೆ ಇಡುವ ಮೂಲಕ ವಿಶೇಷವಾಗಿ ಸ್ವಾಗತಿಸಲಾಯಿತು.

ಕನ್ನಡ ವಿಭಾಗ ಮುಖ್ಯಸ್ಥ ಡಾ. ಪುತ್ತಿ ವಸಂತ ಕುಮಾರ್, ಪತ್ರಿಕೋದ್ಯಮ ವಿಭಾಗ ಉಪನ್ಯಾಸಕರಾದ ಮಂಜುನಾಥ್ ಕಾಮತ್, ಸುಚೇತ್ ಕೋಟ್ಯಾನ್ ಉಪಸ್ಥಿತರಿದ್ದರು.

ಕಾಲೇಜಿನ ಅರ್ಥಶಾಸ ವಿಭಾಗದ ಮುಖ್ಯಸ್ಥ ಲಕ್ಷ್ಮೀನಾರಾಯಣ ಕಾರಂತ ಪ್ರಾಸ್ತಾವಿಕವಾಗಿ ಮಾತನಾಡಿದರು. ತೃತೀಯ ಬಿಎಸ್ಸಿ ವೈಭವ್ ವಂದಿಸಿದರು. ನವ್ಯಶ್ರಿೀ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News