×
Ad

ಪುತ್ತೂರಿನಲ್ಲಿ ದಲಿತ ವಿದ್ಯಾರ್ಥಿನಿಗಳ ಅತ್ಯಾಚಾರ ಪ್ರಕರಣ: ಸಮಾನ ಪರಿಹಾರ ನೀಡುವಂತೆ ಆಗ್ರಹ

Update: 2019-08-01 23:06 IST

ಪುತ್ತೂರು:  ದಲಿತ ವಿದ್ಯಾರ್ಥಿನಿಯರ ನಡೆದ ಅತ್ಯಾಚಾರ ಪ್ರಕರಣದ ಪರಿಹಾರ ವಿತರಣೆಯಲ್ಲಿ  ತಾರತಮ್ಯ ಮಾಡಲಾಗುತ್ತಿದೆ ಎಂದು  ತಾಲೂಕು ಮಟ್ಟದ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡದ ಹಿತರಕ್ಷಣೆ ಮತ್ತು ಕುಂದು ಕೊರತೆ ನಿವಾರಣಾ ಸಮಿತಿ ಸಭೆಯಲ್ಲಿ ದಲಿತ ಮುಖಂಡರು ಆರೋಪಿಸಿ, ಸಮಾನ ರೀತಿಯಲ್ಲಿ ಪರಿಹಾರ ನೀಡುವಂತೆ ಆಗ್ರಹಿಸಿದರು.  

ತಾಲೂಕು ಮಟ್ಟದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಹಿತರಕ್ಷಣೆ ಮತ್ತು ಕುಂದುಕೊರತೆಗಳ ಸಭೆ ಗುರುವಾರ ಸಮಿತಿ ಅಧ್ಯಕ್ಷ ತಹಶೀಲ್ದಾರ್ ಅನಂತ ಶಂಕರ್ ಅಧ್ಯಕ್ಷತೆಯಲ್ಲಿ  ತಾ.ಪಂ. ಸಭಾಂಗಣದಲ್ಲಿ ನಡೆಯಿತು.  

ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ದಲಿತ ಮುಖಂಡರು ಪುತ್ತೂರಿನಲ್ಲಿ ನಡೆದ ಪ್ರೌಢ ಶಾಲಾ ಬಾಲಕಿ ಮೇಲೆ ನಡೆದ ಅತ್ಯಾಚಾರ ಪ್ರಕರಣಕ್ಕೆ ರೂ. 50 ಸಾವಿರ, ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ 8ಲಕ್ಷ ರೂ.ಪರಿಹಾರ ನೀಡುವ ಕುರಿತು ಘೋಷಣೆ ಮಾಡಲಾಗಿದೆ. ಈ ತಾರತಮ್ಯ ಸರಿಯಲ್ಲ ಎಂದು ಆಕ್ಷೇಪಿಸಿದರು. 

ಈ ಬಗ್ಗೆ ಸ್ಪಷ್ಟನೆ ನೀಡಿದ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಗಾಯತ್ರಿ ಸಿ.ಎಚ್ ಅವರು ಅತ್ಯಾಚಾರ ಪ್ರಕರಣಗಳಿಗೆ ಪರಿಹಾರ ನೀಡುವ ಮೊತ್ತದ ಬಗ್ಗೆ ದಲಿತ ದೌರ್ಜನ್ಯ ಕಾಯಿದೆಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ರೂ. 8ಲಕ್ಷ ಹಾಗೂ ಇತರ ಅತ್ಯಾಚಾರಕ್ಕೆ ರೂ. 5 ಲಕ್ಷ ಪರಿಹಾರ ನೀಡಲಾಗುತ್ತದೆ. ಪ್ರೌಢ ಶಾಲಾ ಬಾಲಕಿಯ ಅತ್ಯಾಚಾರಕ್ಕೆ ಪ್ರಕರಣದಲ್ಲಿ ಈಗಾಗಲೇ ಆಕೆಗೆ 2.50ಲಕ್ಷ ರೂ. ನೀಡಲಾಗಿದೆ. ಉಳಿಕೆಯಾಗಿರುವ ರೂ.2.50ಲಕ್ಷ  ಪರಿಹಾರವನ್ನು ಕೇಸ್‍ಗೆ ಹೊಂದಿಕೊಂಡು ನೀಡಲಾಗುತ್ತದೆ ಎಂದು ಹೇಳಿದರು.

ಕೌಡಿಚ್ಚಾರಿನಲ್ಲಿ ನಡೆದ ಚಿನ್ನ ಕಳವು ಪ್ರಕರಣದ ವಿಚಾರಣೆ ಇನ್ನೂ ಪೂರ್ಣಗೊಂಡಿಲ್ಲ. ಕಳವಾದ ಚಿನ್ನ ಪತ್ತೆಯಾಗಿಲ್ಲ. ಚಿನ್ನ ಕಳೆದುಕೊಂಡವರ ಬಾತ್‍ರೂಂನಲ್ಲಿ ಚಿನ್ನ ಸಿಕ್ಕಿದೆ ಎನ್ನುವ ಮಾಹಿತಿ ಹರಿದಾಡುತ್ತಿದೆ. ನನ್ನ ಮೇಲೂ ಆರೋಪಗಳನ್ನು ಮಾಡಲಾಗಿತ್ತು. ಪ್ರಕರಣದ ಕುರಿತು ಸ್ಪಷ್ಟ ವಿಚಾರಗಳನ್ನು ತಿಳಿಸಬೇಕು ಎಂದು ದಲಿತ ಮುಖಂಡ ರಾಜು ಹೊಸ್ಮಠ ಆಗ್ರಹಿಸಿದರು. 

ಸಂಪ್ಯ ಠಾಣಾ ಎಎಸ್‍ಐ ತಿಮ್ಮಯ್ಯ ಅವರು ಮಾಹಿತಿ ನೀಡಿ ಪ್ರಕರಣದ ಕುರಿತು ಡಿವೈಎಸ್ಪಿ ಅವರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿಸಿದರು. ಬಡಕ್ಕೋಡಿ ನಿವಾಸಿ ಹರೀಶ್ ಎಂಬವರು ನಾಪತ್ತೆಯಾಗಿ 20 ದಿನ ಆಗಿದೆ. ತಿಂಗಳಾಡಿಯ ಶೀನಪ್ಪ ನಾಪತ್ತೆಯಾಗಿದ್ದು, ಇದುವರೆಗೆ ಪತ್ತೆಯಾಗಿಲ್ಲ.  ಬಡವರು ನಾಪತ್ತೆಯಾದಾಗ ಪತ್ತೆ ಹಚ್ಚಲು ನಿಧಾನ ಮಾಡಲಾಗುತ್ತಿದೆ ಎಂಬ ಆರೋಪ ಸಭೆಯಲ್ಲಿ ವ್ಯಕ್ತವಾಯಿತು.

ನಾಪತ್ತೆಯಾದ ಹರೀಶ್ ಅವರಲ್ಲಿ ಮೊಬೈಲ್ ಕೂಡ ಇಲ್ಲದಿರುವುದರಿಂದ ಪತ್ತೆ ಕಾರ್ಯಕ್ಕೆ ಸಮಸ್ಯೆಯಾಗಿದೆ. ಒಂದು ವಾರದಲ್ಲಿ ಹುಡುಕುತ್ತೇವೆ ಎಂದು ಪೊಲೀಸ್ ಅಧಿಕಾರಿ ಭರವಸೆ ನೀಡಿದರು. ತಹಶೀಲ್ದಾರ್ ಅನಂತ ಶಂಕರ್ ಮಾತನಾಡಿ, ಪೊಲೀಸ್ ತನಿಖೆ ಗುಪ್ತವಾಗಿ ನಡೆಯ ಬೇಕಾಗುತ್ತದೆ.  ಎಲ್ಲವನ್ನೂ ಸಭೆಯಲ್ಲಿ ಪ್ರಶ್ನೆ ಮಾಡಲು ಮತ್ತು ಉತ್ತರ ಕಂಡುಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಸ್ಪಷ್ಟನೆ ನೀಡಿದರು. 

ಎಲ್ಲಾ ಇಲಾಖೆಗಳಲ್ಲಿ 25 ಶೇ. ಮೀಸಲಾತಿ ಅನುದಾನವನ್ನು ಇತರ ಗುತ್ತಿಗೆದಾರರು ಕೆಲಸ ಮಾಡಿ ಹಣ ಪಡೆಯುತ್ತಿದ್ದಾರೆ.  ತಪ್ಪಿತಸ್ಥರ ಮೇಲೆ ಕ್ರಮ ಆಗಬೇಕು ಎಂದು ಸೇಸಪ್ಪ ನೆಕ್ಕಿಲು ಆಗ್ರಹಿಸಿದರು. ಈ ಬಗ್ಗೆ ಕಡ್ಡಾಯ ಆದೇಶ ಮಾಡಲಾಗುವುದು ಎಂದು ಇಒ ನವೀನ್ ಭಂಡಾರಿ ಭರವಸೆ ನೀಡಿದರು. 

ವೇದಿಕೆಯಲ್ಲಿ ತಾ.ಪಂ. ಉಪಾಧ್ಯಕ್ಷೆ ಲಲಿತಾ ಈಶ್ವರ್, ಸದಸ್ಯೆ ಮೀನಾಕ್ಷಿ ಮಂಜುನಾಥ್, ಕಡಬ ತಹಶೀಲ್ದಾರ್ ಜಾನ್ ಪ್ರಕಾಶ್, ನಗರಸಭಾ ಪೌರಾಯುಕ್ತೆ ರೂಪಾ ಟಿ. ಶೆಟ್ಟಿ ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News