×
Ad

ಗುಜರಾತ್‌ನಲ್ಲಿ ಭಾರೀ ಮಳೆ: ಆರು ಮಂದಿ ಮೃತ್ಯು

Update: 2019-08-01 23:07 IST

ಅಹ್ಮದಾಬಾದ್, ಆ.1: ಗುಜರಾತ್‌ನ ವಡೋದರ ನಗರದಲ್ಲಿ ಬುಧವಾರ ಮಧ್ಯರಾತ್ರಿವರೆಗೆ ಧಾರಾಕಾರ ಮಳೆಯಾಗಿದ್ದು ವಿಮಾನ ನಿಲ್ದಾಣವನ್ನು ಮುಚ್ಚಲಾಗಿದೆ. ರೈಲು ಸೇವೆಯಲ್ಲೂ ವ್ಯತ್ಯಯವಾಗಿದ್ದು ಕೆಲವು ರೈಲುಗಳ ಸಂಚಾರ ಸ್ಥಗಿತಗೊಳಿಸಿದ್ದರೆ ಕೆಲವು ರೈಲುಗಳ ಮಾರ್ಗ ಬದಲಿಸಲಾಗಿದೆ. ರಾಜ್ಯದಲ್ಲಿ ಮಳೆ ಸಂಬಂಧಿ ದುರಂತದಿಂದ 6 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬುಧವಾರ ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆಯವರೆಗಿನ ಅವಧಿಯಲ್ಲಿ ವಡೋದರದಲ್ಲಿ 442 ಮಿಮೀ ಮಳೆಯಾಗಿದ್ದು ಇದು ದಾಖಲೆಯಾಗಿದೆ ಎಂದು ಸರಕಾರದ ಹೇಳಿಕೆ ತಿಳಿಸಿದೆ. ವಡೋದರ ನಗರದ ಹೊರಭಾಗದಲ್ಲಿರುವ ಕೆರೆಯೊಂದು ತುಂಬಿ ಹರಿದ ಕಾರಣ ಗ್ರಾಮವು ಜಲಾವೃತಗೊಂಡಿದ್ದು ಸುಮಾರು 200 ಮಂದಿಯನ್ನು ಸ್ಥಳಾಂತರಿಸಲಾಗಿದೆ. ಅಲ್ಲದೆ ಸುಮಾರು 1000 ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.

  ನಗರದ ಕೆಲವೆಡೆ ವಿದ್ಯುತ್ ಪೂರೈಕೆ ಸ್ಥಗಿತಗೊಂಡ ಕಾರಣ ಲೋಟಸ್ ಮಕ್ಕಳ ಆಸ್ಪತ್ರೆಗೆ ಜನರೇಟರ್ ಮೂಲಕ ವಿದ್ಯುತ್ ಪೂರೈಸುವ ವ್ಯವಸ್ಥೆ ಮಾಡಲಾಗಿದೆ. ವಡೋದರದಲ್ಲಿ ಗುರುವಾರ ಮಳೆಯ ರಭಸ ಸ್ವಲ್ಪ ಕಡಿಮೆಯಾಗಿದೆ. ಆದರೆ ಅಹ್ಮದಾಬಾದ್ ಹಾಗೂ ಕೇಂದ್ರ ಗುಜರಾತ್ ಸೇರಿದಂತೆ ರಾಜ್ಯದ ಕೆಲವೆಡೆ ಗಂಟೆಗೆ 40ರಿಂದ 50 ಕಿ.ಮೀ ವೇಗದ ಗಾಳಿಯೊಂದಿಗೆ ಭಾರೀ ಮಳೆ ಮುಂದುವರಿಯುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಆಡಳಿತ ಸಂಪೂರ್ಣ ಸಜ್ಜಾಗಿದೆ ಎಂದು ಮುಖ್ಯಮಂತ್ರಿ ವಿಜಯ್ ರೂಪಾನಿ ಹೇಳಿದ್ದಾರೆ.

    ಬುಧವಾರ ಉನ್ನತ ಮಟ್ಟದ ಸಭೆ ನಡೆಸಿದ ಮುಖ್ಯಮಂತ್ರಿ ನೆರೆ ಪರಿಸ್ಥಿತಿಯ ಪರಾಮರ್ಶೆ ನಡೆಸಿದರು ಹಾಗೂ ವಡೋದರದಲ್ಲಿ ಸ್ಥಳೀಯ ಆಡಳಿತಕ್ಕೆ ಮಾರ್ಗದರ್ಶನ ನೀಡಲು ಇಬ್ಬರು ಐಎಎಸ್ ಅಧಿಕಾರಿಗಳನ್ನು ನಿಯೋಜಿಸುವಂತೆ ಸೂಚಿಸಿದರು. ಅಲ್ಲದೆ ತಗ್ಗು ಪ್ರದೇಶದಲ್ಲಿ ವಾಸಿಸುತ್ತಿರುವವರು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಜನರಲ್ಲಿ ಮನವಿ ಮಾಡಿಕೊಂಡರು. ಅಗತ್ಯಬಿದ್ದರೆ ನೆರವಾಗಲು ಸೇನಾ ಪಡೆ ಸಜ್ಜಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

 ಈ ಮಧ್ಯೆ , ಗುರುವಾರದಿಂದ ರೈಲು ಸಂಚಾರ ಯಥಾಸ್ಥಿತಿಗೆ ಮರಳಿದೆ. ಆದರೆ ರೈಲುಗಳು ನಿಧಾನವಾಗಿ ಸಂಚರಿಸುತ್ತಿವೆ ಎಂದು ಪಶ್ಚಿಮ ರೈಲ್ವೇ ವಿಭಾಗದ ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News