ಕರಾವಳಿ ಶ್ರಮಿಕ ಸಂಘ ಅಸ್ತಿತ್ವಕ್ಕೆ
ಮಂಗಳೂರು, ಆ.2: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಯಾಣಿಕ ಸ್ನೇಹಿ ಸಾರಿಗೆ ಸಿಬ್ಬಂದಿ ವ್ಯವಸ್ಥೆ ಬಸ್ಸು ಚಾಲಕ ಮತ್ತು ನಿರ್ವಾಹಕರನ್ನೊಳಗೊಂಡ ಕರಾವಳಿ ಶ್ರಮಿಕ ಸಂಘ ಎಂಬ ಸಂಘಟನೆಯನ್ನು ಆರಂಭಿಸಲಾಗಿದೆ ಎಂದು ಸಂಘಟನೆಯ ಗೌರವಾಧ್ಯಕ್ಷ ಎಂ.ಜಿ.ಹೆಗಡೆ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಮಂಗಳೂರಿನಲ್ಲಿರುವ ಖಾಸಗಿ ಸಾರಿಗೆ ವ್ಯವಸ್ಥೆ ರಾಜ್ಯಕ್ಕೆ ಮಾದರಿಯಾಗಿದೆ.ಆದರೆ ಇಲ್ಲಿನ ಕಾರ್ಮಿಕರು ಅಸಂಘಟಿತ ವಲಯಕ್ಕೆ ಸೇರಿದವರಾಗಿದ್ದಾರೆ. ಅವರಿಗೆ ಸೇವಾ ಭದ್ರತೆಯಾಗಲಿ, ಅಪಘಾತಗಳಾದ ಸಂದರ್ಭಗಳಲ್ಲಿ ದೊರೆಯಬೇಕಾದ ಪರಿಹಾರವಾಗಲಿ ದೊರಕುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸುಮಾರು 800 ಬಸ್ ಗಳ ತಲಾ ಇಬ್ಬರು ಚಾಲಕ ಮತ್ತುಇಬ್ಬರು ನಿರ್ವಾಹಕರ ಕುಟುಂಬಕ್ಕೆ ನೆರವಾಗುವ ನಿಟ್ಟಿನಲ್ಲಿ ಅವರನ್ನು ಅವಲಂಬಿಸಿರುವ ಸುಮಾರು ಒಂದೂವರೆಯಿಂದ ಎರಡು ಲಕ್ಷ ಮಂದಿಗೆ ನೆರವಾಗಲು ಈ ಸಂಘಟನೆಯನ್ನು ರಚಿಸಲಾಗಿದೆ ಎಂದವರು ಮಾಹಿತಿ ನೀಡಿದರು.
ಸದ್ಯ 150 ಬಸ್ ಗಳ 300 ಮಂದಿ ಸಂಘಟನೆಯ ಸದಸ್ಯರಾಗಿದ್ದಾರೆ. ಈ ಸಂಘಟನೆಯ ಮೂಲಕ ಬಸ್ ಚಾಲಕ ನಿರ್ವಾಹಕರಿಗೆ ಆರೋಗ್ಯ, ಕುಟುಂಬ, ವಿಮೆ ಹಾಗೂ ಇ.ಎಸ್.ಐ. ಸೌಲಭ್ಯ ದೊರಕಿಸಿ ಕೊಡುವುದು. ಕಾನೂನು ನೆರವು, ಕುಟುಂಬಗಳಿಗೆ ನೆರವು, ಸಹಕಾರಿ ಸಂಘದ ಸ್ಥಾಪನೆ, ಅಪಘಾತದ ಸಂದರ್ಭದಲ್ಲಿ ನೆರವು ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸಿಕೊಡಲು ಸಂಘ ಪ್ರಯತ್ನಿಸಲಿದೆ ಎಂದು ಎಂ.ಜಿ.ಹೆಗ್ಡೆ ತಿಳಿಸಿದ್ದಾರೆ.
ಇವೆಲ್ಲದರ ಜೊತೆಗೆ ಖಾಸಗಿ ಬಸ್ ಚಾಲಕ, ನಿರ್ವಾಹಕರ ಬಗ್ಗೆ ಇರುವ ಸಾರ್ವಜನಿಕರ ದೂರುಗಳಿಗೆ ಸ್ಪಂದಿಸಿ ಸುಧಾರಣೆ ತರುವ ನಿಟ್ಟಿನಲ್ಲಿ ಜನಸ್ನೇಹಿ ಖಾಸಗಿ ಬಸ್ ಸಿಬ್ಬಂದಿ ಸೌಕರ್ಯವನ್ನು ಪ್ರಯಾಣಿಕರಿಗೆ ಒದಗಿಸುವ ನಿಟ್ಟಿನಲ್ಲಿ ಕರಾವಳಿ ಶ್ರಮಿಕ ಸಂಘ ಕಾರ್ಯನಿರ್ವಹಿಸಲಿದೆ ಎಂದು ಎಂ.ಜಿ.ಹೆಗ್ಡೆ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ರೋಹಿತ್ ಕೋಟ್ಯಾನ್, ಗೌರವಾಧ್ಯಕ್ಷ ಶರತ್ ಪದವಿನಂಗಡಿ, ಕಾನೂನು ಸಲಹೆಗಾರ ಶಾಂತರಾಮ ರೈ, ಪ್ರಧಾನ ಕಾರ್ಯದರ್ಶಿ ಮಂಜು ಬೊಂದೆಲ್, ಉಪಾಧ್ಯಕ್ಷ ವಲೇರಿಯನ್ ಸಲ್ದಾನ, ಸಂಘಟನಾ ಕಾರ್ಯದರ್ಶಿ ಸಾಗರ್ ಕೋಡಿಕಲ್, ಕೋಶಾಧಿಕಾರಿ ಲೋಹಿತ್ ದೇರೆಬೈಲ್ ಮತ್ತಿತರರು ಉಪಸ್ಥಿತರಿದ್ದರು.