ಸರಕಾರ ಶೇ.7 ಎನ್ನುತ್ತಿದೆ, ಆದರೆ ಶೇ. 6.5 ಪ್ರಗತಿ ದಾಖಲಿಸಿದರೆ ನಮ್ಮ ಅದೃಷ್ಟ: L&T ಮುಖ್ಯಸ್ಥ ಎ.ಎಂ. ನಾಯ್ಕ್
ಮುಂಬೈ, ಆ.2: “ಈ ವರ್ಷ ಅಭಿವೃದ್ಧಿ ಪ್ರಮಾಣ ಶೇ 6.5ಕ್ಕಿಂತ ಹೆಚ್ಚಾಗದು. ಅವರು (ಸರಕಾರ) ಶೇ. 7 ಹಾಗೂ ಅದಕ್ಕಿಂತಲೂ ಹೆಚ್ಚು ಎಂದು ಹೇಳಿಕೊಂಡರೂ ನನ್ನ ಅನಿಸಿಕೆ ಪ್ರಕಾರ ನಾವು ಶೇ 6.5ರಷ್ಟು ಸಾಧಿಸಿದರೆ ಅದು ನಮ್ಮ ಅದೃಷ್ಟ'' ಎಂದು ಖ್ಯಾತ ಕೈಗಾರಿಕೋದ್ಯಮಿ ಹಾಗೂ L&T ಸಂಸ್ಥೆಯ ಅಧ್ಯಕ್ಷ ಎ.ಎಂ. ನಾಯ್ಕ್ ಹೇಳಿದ್ದಾರೆ.
ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರೂ ಆಗಿರುವ ನಾಯ್ಕ್ ಸಂಸ್ಥೆಯ ವಾರ್ಷಿಕ ಮಹಾಸಭೆ ನಂತರ ಸುದ್ದಿಗಾರರ ಜತೆ ಮಾತನಾಡುತ್ತಾ ಮೇಲಿನಂತೆ ಹೇಳಿದ್ದಾರೆ.
ದತ್ತಾಂಶಗಳ ವಿಶ್ವಾಸಾರ್ಹತೆಯ ವಿಚಾರದಲ್ಲಿ ಪರಿಸ್ಥಿತಿ ಸವಾಲುಭರಿತವಾಗಿದೆ ಎಂದೂ ಹೇಳಿದ ಅವರು, ಅಧಿಕೃತ ಅಂಕಿಅಂಶಗಳನ್ನು ನಂಬುವುದು ಪ್ರತಿಯೊಬ್ಬನ ವಿವೇಚನೆಗೆ ಬಿಟ್ಟಿದ್ದು ಎಂದರು.
ಅಮೆರಿಕಾ ಮತ್ತು ಚೀನಾ ನಡುವೆ ಇರುವ ವ್ಯಾಪಾರ ಸಮರದಿಂದಾಗಿ ನಾವು ಚೀನಾ ದೇಶವನ್ನು ತ್ಯಜಿಸುತ್ತಿರುವ ಕೈಗಾರಿಕೆಗಳನ್ನು ಆಕರ್ಷಿಸಲು ಸಾಧ್ಯವಾದರೆ ನಮ್ಮ ಮುಂದೆ ದೊಡ್ಡ ಅವಕಾಶ ಲಭಿಸಲಿದೆ. ಆದರೆ ನಾವು ಈ ನಿಟ್ಟಿನಲ್ಲಿ ಯಶಸ್ಸು ಸಾಧಿಸಿಲ್ಲ, ಕಂಪೆನಿಗಳು ಈಗಾಗಲೇ ವಿಯೆಟ್ನಾಂ ಹಾಗೂ ಥಾಯ್ಲೆಂಡ್ ದೇಶಗಳನ್ನು ಆಯ್ದುಕೊಂಡಿವೆ ಎಂದು ಅವರು ಹೇಳಿದರು.
“ಇಲ್ಲಿ ಎಷ್ಟು ಕೈಗಾರಿಕೆಗಳು ಬಂದಿವೆ ? ಕಳೆದ ಎರಡು ವರ್ಷಗಳಿಂದ ತನ್ನ ಕಂಪೆನಿಗಳನ್ನು ಚೀನಾದಿಂದ ಹೊರಕ್ಕೆ ಸಾಗಿಸುವ ಬಗ್ಗೆ ಅಮೆರಿಕಾ ಮಾತನಾಡುತ್ತಿದೆ. ಆದರೆ ನಾವು ಚುನಾವಣೆಯಲ್ಲಿಯೇ ವ್ಯಸ್ತರಾಗಿದ್ದೆವು. ಆದುದರಿಂದ ಏನನ್ನೂ ಮಾಡಿಲ್ಲ'' ಎಂದು ನಾಯ್ಕ್ ಹೇಳಿದರು.
ಚೀನಾದಿಂದ ಹೊರಬರುತ್ತಿರುವ ಹೂಡಿಕೆಗಳ ಪೈಕಿ ನಾಲ್ಕನೇ ಒಂದಂಶವನ್ನಾದರೂ ನಾವು ಆಕರ್ಷಿಸಬಲ್ಲೆವಾದರೆ ಅದು ದೊಡ್ಡ ಸಾಧನೆ ಎಂದು ಅವರು ಹೇಳಿಕೊಂಡರು.
ನರೇಂದ್ರ ಮೋದಿ ಗುಜರಾತ್ ಸಿಎಂ ಆಗಿದ್ದಾಗ ಯೋಜನೆಗಳಿಗೆ ಶೀಘ್ರ ಅನುಮೋದನೆ ದೊರಕುತ್ತಿದ್ದಂತೆಯೇ ಈಗಲೂ ಆಗಬೇಕಿದೆ ಎಂದು ನಾಯ್ಕ್ ಹೇಳಿದರು.