ಉನ್ನಾವೋ ಘಟನೆ ಬಗ್ಗೆ ಪ್ರಶ್ನಿಸಿದ್ದ ವಿದ್ಯಾರ್ಥಿನಿಯ ಹೆತ್ತವರಲ್ಲಿ ಆತಂಕ!: ಕಾರಣವೇನು ಗೊತ್ತಾ?

Update: 2019-08-02 10:55 GMT

ಲಕ್ನೋ, ಆ.2: ಬಾರಾಬಂಕಿಯ ಆನಂದ್ ಭವನ್ ಶಾಲೆಯಲ್ಲಿ ನಡೆದ ಜಾಗೃತಿ ಕಾರ್ಯಕ್ರಮದಲ್ಲಿ ಉನ್ನಾವೋ ಅತ್ಯಾಚಾರ ಸಂತ್ರಸ್ತೆಯ ಕಾರು ಅಪಘಾತ ಪ್ರಕರಣ ಉಲ್ಲೇಖಿಸಿ ಒಂಬತ್ತನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಕೇಳಿದ ಹಲವು ಪ್ರಶ್ನೆಗಳಿಗೆ ಪೊಲೀಸ್ ಅಧಿಕಾರಿ ಎಸ್ ಗೌತಮ್ ಕಕ್ಕಾಬಿಕ್ಕಿಯಾದ ಘಟನೆ ಸಾಕಷ್ಟು ಸುದ್ದಿಯಾಗಿತ್ತು. ಇದರ ಬೆನ್ನಿಗೇ ವಿದ್ಯಾರ್ಥಿನಿಯ ಹೆತ್ತವರು ಇದೀಗ ಆಕೆಯ ಸುರಕ್ಷತೆಯ ಬಗ್ಗೆ ಭಯ ಪಡಲಾರಂಭಿಸಿದ್ದಾರೆ.

ಘಟನೆಯ ವೀಡಿಯೋ ವೈರಲ್ ಆದಂದಿನಿಂದ ಅವರು ತಮ್ಮ ಮಗಳನ್ನು ಶಾಲೆಗೆ ಕಳುಹಿಸಿಲ್ಲ. ಸೋಮವಾರ ತಾವು ಆಕೆಯ ಶಾಲಾ ಪ್ರಾಂಶುಪಾಲರನ್ನು ಕಂಡು ಮಾತನಾಡಿದ ನಂತರವಷ್ಟೇ  ಆಕೆಯನ್ನು ಮತ್ತೆ ಶಾಲೆಗೆ ಕಳುಹಿಸುವ ಬಗ್ಗೆ ನಿರ್ಧರಿಸುವುದಾಗಿ ಅವರು ಹೇಳಿಕೊಂಡಿದ್ದಾರೆ.

“ಆಕೆ ಚಿಕ್ಕವಳು ಹಾಗೂ ಅನನುಭವಿ. ಪತ್ರಿಕೆಗಳಲ್ಲಿ ಓದಿದ್ದನ್ನು ಹಾಗೂ ಟಿವಿಯಲ್ಲಿ ನೋಡಿದ್ದನ್ನು ಆಕೆ ಹೇಳಿದ್ದಾಳೆ. ಆಕೆ ಚೆನ್ನಾಗಿ ಮಾತನಾಡುತ್ತಾಳೆ ಹಾಗೂ ಶಾಲೆಯ ಇತರ ಮಕ್ಕಳು ಆಕೆಯನ್ನು ಹುರಿದುಂಬಿಸಿದ್ದಾರೆ'' ಎಂದು ಆಕೆಯ ತಂದೆ ಹೇಳಿದ್ದಾರೆ.

ಶಾಲೆಯಲ್ಲಿ ಆ ದಿನ ನಡೆಯಲಿದ್ದ ಕಾರ್ಯಕ್ರಮದ ಬಗ್ಗೆ ಹೆತ್ತವರಿಗೆ ಮಾಹಿತಿ ಇರಲಿಲ್ಲ ಎಂದ ಅವರು ``ಅಂತಹ ಕಾರ್ಯಕ್ರಮವಿದ್ದರೂ  ವಿದ್ಯಾರ್ಥಿನಿಯ ಖಾಸಗಿತನವನ್ನು ಗೌರವಿಸಬೇಕು'' ಎಂದು ಅವರು ಹೇಳಿದ್ದಾರೆ.

``ನಮಗಿರುವುದು ಒಬ್ಬಳೇ ಮಗಳು ಹಾಗೂ ಆಕೆ  ತನ್ನ ಮನಸ್ಸಿನಲ್ಲಿದ್ದುದನ್ನು ಸಾರ್ವಜನಿಕವಾಗಿ ಹೇಳಿಕೊಂಡ ಕಾರಣಕ್ಕೆ ತೊಂದರೆಯಲ್ಲಿ ಸಿಲುಕುವುದು ನಮಗೆ ಬೇಕಾಗಿಲ್ಲ'' ಎಂದರು.

ಘಟನೆಯ ಸಂದರ್ಭ ಹಾಜರಿದ್ದ ಹೆಚ್ಚುವರಿ ಎಸ್‍ಪಿ ಗೌತಮ್ ಪ್ರತಿಕ್ರಿಯಿಸಿ, “ವಿದ್ಯಾರ್ಥಿನಿ ಕಾಲ್ಪನಿಕ ಪ್ರಶ್ನೆ ಕೇಳಿದ್ದಾಳೆ. ಆದರೂ ಪೊಲೀಸರು ಜನರನ್ನು ರಕ್ಷಿಸಲು ಬದ್ಧರಾಗಿದ್ದಾರೆ ಎಂದು ನಾವು ಆಕೆಗೆ ಭರವಸೆ ನೀಡಿದೆವು” ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News