ಉಗ್ರ ದಾಳಿ ಭೀತಿ: ವಾಪಸ್ ತೆರಳುವಂತೆ ಅಮರನಾಥ ಯಾತ್ರಿಗಳಿಗೆ ಸೂಚಿಸಿದ ಸರಕಾರ
ಶ್ರೀನಗರ, ಆ.2: ಅಮರನಾಥ ಯಾತ್ರಾರ್ಥಿಗಳು ತಮ್ಮ ಯಾತ್ರೆಯನ್ನು ಮೊಟಕುಗೊಳಿಸಿ ಆದಷ್ಟು ಶೀಘ್ರ ರಾಜ್ಯ ಬಿಟ್ಟು ತೆರಳುವಂತೆ ಜಮ್ಮು ಕಾಶ್ಮೀರ ಸರಕಾರ ಶುಕ್ರವಾರ ಸೂಚಿಸಿದೆ. ಉಗ್ರ ದಾಳಿಯ ಸಂಭಾವ್ಯತೆಯ ಬಗ್ಗೆ ಸೇನೆಗೆ ಗುಪ್ತಚರ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
“ಗುಪ್ತಚರ ಮಾಹಿತಿಗಳ ಪ್ರಕಾರ ಅಮರನಾಥ ಯಾತ್ರೆಗೆ ಉಗ್ರ ಬೆದರಿಕೆಯಿರುವುದರಿಂದ ಹಾಗೂ ಕಾಶ್ಮೀರ ಕಣಿವೆಯಲ್ಲಿನ ಈಗಿನ ಸುರಕ್ಷತಾ ಪರಿಸ್ಥಿತಿಯನ್ನು ಅವಲೋಕಿಸಿ ಯಾತ್ರಾರ್ಥಿಗಳ ಹಾಗೂ ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಅವರೆಲ್ಲರೂ ಆದಷ್ಟು ಬೇಗ ವಾಪಸ್ ತೆರಳಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ'' ಎಂದು ಗೃಹ ಸಚಿವಾಲಯ ಹೊರಡಿಸಿದ ಸೂಚನೆ ತಿಳಿಸಿದೆ.
ಪಾಕಿಸ್ತಾನ ಸೇನೆಯ ಬೆಂಬಲ ಹೊಂದಿರುವ ಉಗ್ರರು ಅಮರನಾಥ ಯಾತ್ರೆಯ ಮೇಲೆ ದಾಳಿ ನಡೆಸಲು ಯತ್ನಿಸುತ್ತಿರುವ ಕುರಿತಾದ ಗುಪ್ತಚರ ವರದಿಗಳಿವೆ ಎಂದು ಸೇನೆ ಹಾಗೂ ರಾಜ್ಯ ಪೊಲೀಸರು ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಬೆನ್ನಲ್ಲೇ ಯಾತ್ರಾರ್ಥಿಗಳಿಗೆ ಸೂಚನೆ ಹೋಗಿದೆ.
ಪಾಕಿಸ್ತಾನದಲ್ಲಿ ತಯಾರಾಗಿದೆ ಎಂದು ಸೂಚಿಸುವ ಗುರುತಿರುವ ನೆಲ ಬಾಂಬ್ ಹಾಗೂ ಟೆಲಿಸ್ಕೋಪ್ ಹೊಂದಿರುವ ಎಂ-24 ಅಮೆರಿಕನ್ ಸ್ನೈಪರ್ ರೈಫಲ್ ಈಗಾಗಲೇ ಸೇನೆ ಪತ್ತೆ ಹಚ್ಚಿದೆ ಎಂದು ಚಿನಾರ್ ಕಾರ್ಪ್ಸ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಕೆ ಕಜೆ ಎಸ್ ಧಿಲ್ಲಾನ್ ಮಾಹಿತಿ ನೀಡಿದ್ದಾರೆ. ಅಮರನಾಥ ಯಾತ್ರೆಯ ಹಾದಿಯಲ್ಲಿ ಬಾಂಬುಗಳು ಪತ್ತೆಯಾಗಿದೆ ಹಾಗೂ ಐಇಡಿ ಸ್ಫೋಟದ ಅಪಾಯವೂ ಇದೆ ಎಂದು ಅವರು ಹೇಳಿದ್ದಾರಲ್ಲದೆ ಶೋಧ ಕಾರ್ಯ ಇನ್ನೂ ಮುಂದುವರಿದಿದೆ ಎಂದಿದ್ದಾರೆ.