ಇನ್ನು ಸುದೀರ್ಘ ಸಂದೇಶ ಓದುವುದು ಸುಲಭ: ಹೊಸ ಫೀಚರ್ ಆರಂಭಿಸಿದ ವಾಟ್ಸ್ಯಾಪ್

Update: 2019-08-02 14:29 GMT

ಹೊಸದಿಲ್ಲಿ, ಆ.2: ವಾಟ್ಸಾಪ್‌ನಲ್ಲಿ ಸಂದೇಶವೊಂದು ಹಲವು ಬಾರಿ ಫಾರ್ವರ್ಡ್ ಆದಾಗ ಆ ಬಗ್ಗೆ ಬಳಕೆದಾರರಿಗೆ ತಿಳಿಸುವ ವ್ಯವಸ್ಥೆಯೊಂದನ್ನು ಆರಂಭಿಸಲಾಗಿದೆ.

ಮತ್ತೆ ಮತ್ತೆ ಫಾರ್ವರ್ಡ್ ಆಗಿರುವ ಸಂದೇಶ ಎಂಬುದನ್ನು ಎರಡು ಬಾಣದ ಗುರುತಿನ ಸಂಕೇತದ ಮೂಲಕ ಸೂಚಿಸಲಾಗುತ್ತದೆ. ಪದೇ ಪದೇ ಫಾರ್ವರ್ಡ್ ಆಗುವ ಸಂದೇಶವನ್ನು ಬಳಕೆದಾರರು ಮತ್ತೊಬ್ಬರಿಗೆ ಫಾರ್ವರ್ಡ್ ಮಾಡಿದಾಗ ಅವರಿಗೆ ಸೂಚನೆಯನ್ನೂ ಕಳುಹಿಸಲಾಗುತ್ತದೆ. ಒಂದು ಸಂದೇಶವನ್ನು ಐದಕ್ಕಿಂತ ಹೆಚ್ಚು ಬಾರಿ ಫಾರ್ವರ್ಡ್ ಮಾಡಿದಾಗ ಎರಡು ಬಾಣದ ಗುರುತು ಮೂಡುತ್ತದೆ. ಅಲ್ಲದೆ ಸರಣಿ ಅಕ್ಷರ ಸಂದೇಶಗಳನ್ನು, ಸುದೀರ್ಘ ಅಕ್ಷರ ಸಂದೇಶಗಳನ್ನು ಮೊಟಕುಗೊಳಿಸಲೂ ವಾಟ್ಸಾಪ್ ನಿರ್ಧರಿಸಿದೆ.

ಬಳಕೆದಾರರು ಮೆಲ್ಲನೆ ಟ್ಯಾಪ್ ಮಾಡಿದರೆ ಪೂರ್ತಿ ಸಂದೇಶವನ್ನು ಓದುವ ವ್ಯವಸ್ಥೆ ಮಾಡಲಾಗಿದೆ. ವಾಟ್ಸಾಪ್ ಬಳಕೆದಾರರಿಗೆ, ಅದರಲ್ಲೂ ಗ್ರೂಪ್ ಚಾಟ್ ಸಂದರ್ಭ ಹೊಸ ವ್ಯವಸ್ಥೆಯಿಂದ ಅನುಕೂಲವಾಗಲಿದೆ ಎಂದು ಸಂಸ್ಥೆಯ ವಕ್ತಾರರು ಹೇಳಿದ್ದಾರೆ. ಕಳೆದ ವರ್ಷ ವಾಟ್ಸಾಪ್ ಆರಂಭಿಸಿದ ‘ಫಾರ್ವರ್ಡೆಡ್’ ಸಂದೇಶಗಳ ಗುರುತು ಪಟ್ಟಿಗೆ ಇದೊಂದು ಹೊಸ ಸೇರ್ಪಡೆಯಾಗಿದೆ. ಫಾರ್ವರ್ಡ್ ಮಾಡಲಾದ ಪ್ರತಿಯೊಂದು ಸಂದೇಶದ ಮೇಲ್ಭಾಗದಲ್ಲಿ ಈ ಗುರುತು ಪಟ್ಟಿ ಕಾಣಿಸುತ್ತದೆ. ವಾಟ್ಸಾಪ್ ವೇದಿಕೆಯ ಮೂಲಕ ಸುಳ್ಳು ಸುದ್ದಿ ಪ್ರಸಾರ ಮಾಡುವುದನ್ನು ನಿಯಂತ್ರಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ವಾಟ್ಸಾಪ್ ತಿಳಿಸಿದೆ.

ಈ ಮಧ್ಯೆ, ಭಾರತದಲ್ಲಿ ಡಿಜಿಟಲ್ ವ್ಯವಹಾರಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಈ ವರ್ಷಾಂತ್ಯಕ್ಕೆ ಪಾವತಿ ಸೇವೆ ‘ವಾಟ್ಸಾಪ್ ಪೇ’ ವ್ಯವಸ್ಥೆಯನ್ನು ಆರಂಭಿಸುವುದಾಗಿ ಸಂಸ್ಥೆಯ ಜಾಗತಿಕ ಮುಖ್ಯಸ್ಥ ವಿಲ್ ಕ್ಯಾಥರ್ಟ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News