×
Ad

ಲಿಂಗಾಯತ ಧರ್ಮ ಚರ್ಚೆಗೆ ಪೇಜಾವರ ಸ್ವಾಮೀಜಿ ಬರಲಿ: ಸಾಣೆಹಳ್ಳಿ ಸ್ವಾಮೀಜಿ

Update: 2019-08-02 20:10 IST

ಉಡುಪಿ, ಆ.2: ಲಿಂಗಾಯತ ಧರ್ಮ ಹಿಂದೂ ಧರ್ಮದ ಒಳಗೇ ಇದೆ ಎಂಬುದನ್ನು ಸಾಬೀತು ಪಡಿಸುವುದಾಗಿ ಪೇಜಾವರ ಸ್ವಾಮೀಜಿ ಪಂಥಾಹ್ವಾನ ನೀಡುವ ಅಗತ್ಯವೇ ಇಲ್ಲ. ಬಸವ ಸೇರಿದಂತೆ ಎಲ್ಲ ಶರಣರು ಹಿಂದೂ ಧರ್ಮದಲ್ಲಿರುವ ವೈರುದ್ಯಗಳ ವಿರುದ್ಧ ಹೋರಾಡಿ ಹೊಸದಾಗಿ ಲಿಂಗಾಯತ ಧರ್ಮವನ್ನು ಜಾರಿಗೆ ತಂದರು. ಹೀಗಾಗಿ ಮತ್ತೆ ಅದನ್ನು ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳುವ ಅಗತ್ಯವೇ ಇಲ್ಲ ಎಂದು ಚಿತ್ರದುರ್ಗ ಜಿಲ್ಲೆ ಸಾಣೆಹಳ್ಳಿ ಶ್ರೀತರಳಬಾಳು ಜಗದ್ಗುರು ಶಾಖಾ ಮಠದ ಶ್ರೀಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.

ಉಡುಪಿಯಲ್ಲಿ ಇಂದು ನಡೆದ ‘ಮತ್ತೆ ಕಲ್ಯಾಣ’ ಕಾರ್ಯಕ್ರಮದ ಹಿನ್ನೆಲೆ ಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ಚರ್ಚೆಯ ಮೂಲಕ ತೀರ್ಮಾನ ಆಗುವ ಸಂಗತಿ ಅಲ್ಲ. ಅದರ ಮೇಲೆಯೂ ಪೇಜಾವರ ಸ್ವಾಮೀಜಿಗೆ ಚರ್ಚೆ ಮಾಡಲೇ ಬೇಕೆಂಬ ಅಭಿಲಾಷೆ ಇದ್ದರೆ ಸಾಣೆಹಳ್ಳಿ ಮಠಕ್ಕೆ ಬರುವಂತೆ ಆಹ್ವಾನ ನೀಡಿದರು.

ತಾವು ಒಂದು ತಿಂಗಳ 'ಮತ್ತೆ ಕಲ್ಯಾಣ' ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತಿದ್ದು, ಆದು ಮುಗಿದ ಬಳಿಕ ಆಗಸ್ಟ್ ತಿಂಗಳ ನಂತರ ಯಾವುದೇ ದಿನ ಸಾಣೆಹಳ್ಳಿ ಮಠಕ್ಕೆ ಬಂದು ಸಮಾಲೋಚನೆ ಮಾಡಬಹುದು. ಅದಕ್ಕೆ ನಾವು ಸಿದ್ಧರಿದ್ದೇವೆ. ಅವರು ಬರುವ ದಿನಾಂಕವನ್ನು ಮೊದಲೇ ತಿಳಿಸಬೇಕು. ಆದರೆ ಅವರು ಹೇಳಿದಂತೆ ನಾವು ಮೈಸೂರಿಗೆ ಹೋಗುವುದಿಲ್ಲ ಎಂದರು.

ಲಿಂಗಾಯತ ಧರ್ಮ ಸ್ವತಂತ್ರ ಧರ್ಮ. ಅದು ಹಿಂದೂ ಧರ್ಮದ ಭಾಗವೇ ಅಲ್ಲ ಎಂದು ವಚನಗಳೇ ಹೇಳಿವೆ. ಅದೇ ರೀತಿ ಲಿಂಗಾಯತ ಧರ್ಮ ಮತ್ತು ವೀರಶೈವ ಧರ್ಮ ಎಂಬುದು ಒಂದೇ ಅಲ್ಲ. ಅದು ಎರಡೂ ಬೇರೆ ಬೇರೆ ಧರ್ಮಗಳಾಗಿವೆ. ಒಂದು ಕಾಲಕ್ಕೆ ಅವು ಎರಡು ಒಂದೇ ಎಂಬ ಭಾವನೆ ಇತ್ತು. ಆದರೆ ಶೈವ ಧರ್ಮದ ಎಲ್ಲ ಆಚರಣೆಗಳನ್ನು ವೀರಶೈವ ಧರ್ಮ ಒಳಗೊಂಡಿರುವುದರಿಂದ, ಅದು ಲಿಂಗಾಯತ ಧರ್ಮ ಆಗಲು ಸಾಧ್ಯವೇ ಇಲ್ಲ. ಬಸವ ಪರಂಪರೆಯ ಧರ್ಮಕ್ಕೂ ಪೇಜಾವರ ಸ್ವಾಮೀಜಿ ಹೇಳುವ ಧರ್ಮಕ್ಕೂ ತುಂಬಾ ಅಂತರ ಇರುವುದರಿಂದ ಇವು ಎರಡೂ ಒಂದೇ ಅಲ್ಲ ಎಂದು ಅವರು ಅಭಿಪ್ರಾಯ ಪಟ್ಟರು.

ಪೇಜಾವರ ಸ್ವಾಮೀಜಿಯ ದೃಷ್ಠಿಯಲ್ಲಿ ಶಿವ ಎಂಬುದು ಗುಡಿಯಲ್ಲಿರುವ ಶಿವನ ವಿಗ್ರಹ ಎಂದು ಭಾವಿಸಿದ್ದಾರೆ. ಆದರೆ ಶಿವ ಎಂಬುದು ಇಷ್ಟ ಲಿಂಗ. ಅದು ಸ್ಥಾವರ ಅಲ್ಲ, ಜಂಗಮ. ಆದುದರಿಂದ ಅವರು ಹೇಳೋ ಶಿವನಿಗೂ ನಾವು ಹೇಳೋ ಶಿವನಿಗೆ ತುಂಬಾ ಅಂತರ ಇದೆ ಎಂದು ಸಾಣೆಹಳ್ಳಿ ಸ್ವಾಮೀಜಿ ಹೇಳಿದರು.

ನೀಲಾ ಆರೋಪ ಸರಿಯಲ್ಲ

ವಚನ ವಿರೋಧಿ ಸಂಘಪರಿವಾರದವರ ಜೊತೆ ವೇದಿಕೆ ಹಂಚಿಕೊಳ್ಳುವುದಿಲ್ಲ ಎಂಬುದು ಕೆ.ನೀಲಾ ಅವರ ವೈಯಕ್ತಿಕ ಅಭಿಪ್ರಾಯವಾಗಿದೆ. ನಾವು ಆಹ್ವಾನ ಪತ್ರಿಕೆ ರಚಿಸುವಾಗ ಉಪನ್ಯಾಸಕರನ್ನು ಮಾತ್ರ ಗುರುತಿಸಿದ್ದೇವೆ. ಅಧ್ಯಕ್ಷತೆ ಮತ್ತು ಮುಖ್ಯ ಅತಿಥಿಗಳನ್ನು ಆಯ್ಕೆ ಮಾಡುವ ಜವಾಬ್ದಾರಿಯನ್ನು ಸ್ಥಳೀಯ ಸಮಿತಿಗಳಿಗೆ ವಹಿಸಿಕೊಟ್ಟಿದ್ದೇವೆ. ಆದರೂ ಆ ಬಗ್ಗೆ ಶರ್ತಗಳನ್ನು ವಿಧಿಸಲಾಗಿತ್ತು. ಆದುದರಿಂದ ಆಯ್ಕೆ ವಿಚಾರ ಸ್ಥಳೀಯ ಸಮಿತಿಗಳಿಗೆ ಬಿಟ್ಟದ್ದು. ಅದಕ್ಕೆ ನಮ್ಮ ಮೇಲೆ ಆರೋಪ ಮಾಡುವುದು ಸರಿಯಲ್ಲ. ಅವರು ಇಲ್ಲಿಗೆ ಬಂದು ಅದೇ ವೇದಿಕೆಯಲ್ಲಿ ಪ್ರತಿಭಟನೆ ಮಾಡುತ್ತಿದ್ದರೆ ನಾವು ಸ್ವಾಗತ ಮಾಡುತ್ತಿದ್ದೆವು ಎಂದು ಸ್ವಾಮೀಜಿ ಸ್ಪಷ್ಟನೆ ನೀಡಿದರು.

ವಚನ ಧರ್ಮದ ಎಲ್ಲೂ ಯಾವುದೇ ಪ್ರಾಣಿ ಹಿಂಸೆಯನ್ನು ಪ್ರೋತ್ಸಾಹಿಸಿಲ್ಲ. ಆದರೆ ಯಾರೂ ಕೂಡ ಯಾವುದೇ ಆಹಾರವನ್ನು ತಿನ್ನಬಹುದು. ಇಂತಹದ್ದೆ ಆಹಾರ ಸೇವಿಸಿ ಎಂಬುದಾಗಿ ಒತ್ತಾಯ ಮಾಡಿ ಹೇಳುವುದು ಸರಿಯಲ್ಲ. ಒಬ್ಬ ವ್ಯಕ್ತಿ ತನಗೆ ಇಷ್ಟವಾದ ಮಾಂಸ ಅಥವಾ ಸಸ್ಯಾಹಾರವನ್ನು ತಿನ್ನಬಹುದು ಎಂದ ಅವರು, ದೇಶದಲ್ಲಿ ನಡೆಯುತ್ತಿರುವ ಗುಂಪು ಹತ್ಯೆಗೆ ಧರ್ಮ ಮತ್ತು ರಾಜಕೀಯವೂ ಕಾರಣವಾಗಿದೆ. ಆದುದರಿಂದ ಧರ್ಮಕಾರಣ ಮತ್ತು ರಾಜ ಕಾರಣ ಎರಡೂ ಸುಧಾರಣೆ ಆಗಬೇಕಾಗಿದೆ. ಅದರ ಜವಾಬ್ದಾರಿ ಮಾಧ್ಯಮ ಮತ್ತು ಯುವಕ ಸಮುದಾಯದ ಮೇಲೆ ಇದೆ ಎಂದರು.

ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಸಂಬಂಧಿಸಿ ಯಡಿಯೂರಪ್ಪ, ಸಿದ್ದರಾಮಯ್ಯ ಮಾಡಲಿ ಎಂಬುದಾಗಿ ಅವರ ಮೇಲೆ ಭಾರ ಹಾಕಿ ಅವರನ್ನು ದೂರುವುದು ಸರಿಯಲ್ಲ. ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದ ಮೂಲಕ ಸಾಧಿಸುವ ಕೆಲಸ ಅಲ್ಲ. ಅದಕ್ಕೆ ಕಾನೂನಾತ್ಮಕವಾಗಿಯೇ ಹೋರಾಟ ಮಾಡುವುದು ಹೆಚ್ಚು ಸೂಕ್ತವಾಗಿದೆ ಎಂದು ಸಾಣೆಹಳ್ಳಿ ಸ್ವಾಮೀಜಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News