×
Ad

ಗಾಂಜಾ ಪೂರೈಕೆ ತಡೆಗೆ ಕಟ್ಟುನಿಟ್ಟಿನ ಕ್ರಮ: ಎಸ್ಪಿ ನಿಶಾ ಜೇಮ್ಸ್

Update: 2019-08-02 20:15 IST

ಉಡುಪಿ, ಆ.2: ಉಡುಪಿ ಜಿಲ್ಲೆಗೆ ರಾಜ್ಯದ ಇತರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಗಾಂಜಾ ಹಾಗೂ ಇತರ ಮಾದಕ ದ್ರವ್ಯಗಳು ಸರಬರಾಜು ಆಗುತ್ತಿದ್ದು, ಇವುಗಳ ತಡೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕಿ ನಿಶಾ ಜೇಮ್ಸ್ ತಿಳಿಸಿದ್ದಾರೆ.

ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳು, ಮಹಾರಾಷ್ಟ್ರ ಹಾಗೂ ಬೆಂಗಳೂರಿ ನಿಂದ ಗಾಂಜಾ ಉಡುಪಿಗೆ ಪೂರೈಕೆಯಾಗುತ್ತದೆ. ಮಹಾರಾಷ್ಟ್ರದಿಂದ ರೈಲಿನ ಮೂಲಕ ಹಾಗೂ ಬೆಂಗಳೂರಿನಿಂದ ಬಸ್ ಪಾರ್ಸೆಲ್‌ಗಳ ಮೂಲಕ ಗಾಂಜಾವನ್ನು ಕಳುಹಿಸಿಕೊಡಲಾಗುತ್ತಿದೆ ಎಂದರು.

ಈ ಸಂಬಂಧ ಬಸ್ ಮಾಲಕರ ಸಭೆ ಕರೆದು ಯಾವುದೇ ಕಾರಣಕ್ಕೂ ಬಸ್ ಗಳಲ್ಲಿ ಪಾರ್ಸೆಲ್‌ಗಳನ್ನು ಪಡೆದುಕೊಳ್ಳದಂತೆ ಕಟ್ಟುನಿಟ್ಟಿನ ಸೂಚನೆ ನೀಡ ಲಾಗಿತ್ತು. ಇದರಿಂದ ಬಸ್‌ಗಳಲ್ಲಿನ ಪಾರ್ಸೆಲ್ ಮೂಲಕ ಬರುವುದು ಕಡಿಮೆ ಆಗಿದೆ. ಆದರೆ ಈಗ ಬಸ್‌ನಲ್ಲಿ ಬರುವ ಪ್ರಯಾಣಿಕರ ಮೂಲಕ ಈ ಪಾರ್ಸೆಲ್‌ಗಳನ್ನು ಕಳುಹಿಸಿಕೊಡಲಾಗುತ್ತಿದೆ. ಮುಂದೆ ಈ ಬಗ್ಗೆಯೂ ಸೂಕ್ತ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದರು.

ಮಾದಕ ದ್ರವ್ಯ ಮಾರಾಟ ಹಾಗೂ ಸೇವನೆ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದ್ದು, ವಿಶೇಷ ಕಾರ್ಯಾಚರಣೆ ಮೂಲಕ ಉಡುಪಿ ಜಿಲ್ಲೆಯ ವಿವಿಧೆಡೆ ಒಟ್ಟು 51 ಮಂದಿಯನ್ನು ಬಂಧಿಸಲಾಗಿದೆ. ಇದರಲ್ಲಿ ಗಾಂಜಾ ಮಾರಾಟಕ್ಕೆ ಸಂಬಂಧಿಸಿ ಆರು ಮಂದಿ ಹಾಗೂ ಸೇವನೆಗೆ ಮಾಡಿರುವ 45 ಮಂದಿಯನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದರು.

ಮಾದಕ ದ್ರವ್ಯದ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈಗಾಗಲೇ ಪೊಲೀಸ್ ಇಲಾಖೆಯ ವತಿಯಿಂದ ಜಿಲ್ಲೆಯ 93 ಶಾಲಾ ಕಾಲೇಜುಗಳಲ್ಲಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಆ.3ರಂದು ಬೆಳಗ್ಗೆ 10ಗಂಟೆಗೆ ಮಣಿ ಪಾಲ ಕೆನರಾ ಮಾಲ್‌ನಲ್ಲಿ ಸಹಿ ಸಂಗ್ರಹ ಅಭಿಯಾನವನ್ನು ಹಮ್ಮಿಕೊಳ್ಳಲಾ ಗಿದೆ. ಎಂದು ಎಸ್ಪಿ ಮಾಹಿತಿ ನೀಡಿದರು.

ಮಕ್ಕಳ ಅಪಹರಣ ನಡೆದಿಲ್ಲ: ಎಸ್ಪಿ

ಮಕ್ಕಳ ಅಪಹರಣಕ್ಕೆ ಸಂಬಂಧಿಸಿ ಪರ್ಕಳದಲ್ಲಿ ಯಾವುದೇ ಪ್ರಕರಣಗಳು ದಾಖಲಾಗಿಲ್ಲ. ಈ ಬಗ್ಗೆ ಸುಳ್ಳು ಸುದ್ದಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿಸಲಾಗುತ್ತಿದೆ. ನಕಲಿ ಫೋಟೋಗಳನ್ನು ಹಾಕಿ ಮಕ್ಕಳ ಅಪಹರಣ ಆಗಿದೆ ಎಂಬುದಾಗಿ ಸುಳ್ಳು ಪೋಸ್ಟ್‌ಗಳನ್ನು ಫಾರ್ವಡ್ ಮಾಡಲಾಗುತ್ತಿದೆ. ಯಾವುದೇ ಕಾರಣಕ್ಕೂ ಇಂತಹ ಸುದ್ದಿಗಳನ್ನು ಹಬ್ಬಿಸದೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಬೇಕು. ಅದೇ ರೀತಿ ಇರಾನಿ ಗ್ಯಾಂಗ್‌ಗೆ ಸಂಬಂಧಿಸಿಯೂ ಜಿಲ್ಲೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ. ಆದರೂ ಅಪರಿಚಿತರ ಬಗ್ಗೆ ಎಚ್ಚರಿಕೆ ಯಿಂದ ಇರುವಂತೆ ಸಾರ್ವಜನಿಕರಿಗೆ ತಿಳಿಸಲಾಗಿದೆ ಎಂದು ಎಸ್ಪಿ ನಿಶಾ ಜೇಮ್ಸ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News