ಮಹಿಳೆಯರಿಗೆ ರಾತ್ರಿ ಪಾಳಿಯ ಕೆಲಸ ಸರಿಯಲ್ಲ ಎಂದ ಬಿಜೆಪಿ ಶಾಸಕಿ

Update: 2019-08-02 14:48 GMT

ಪಣಜಿ, ಆ.2: ಮಹಿಳೆಯರು ಸ್ತ್ರೀಸಹಜವಾದ ಕೋಮಲತೆಯುಳ್ಳವರಾದ ಕಾರಣ ಅವರನ್ನು ರಾತ್ರಿ ಪಾಳಿಯಲ್ಲಿ ದುಡಿಸಿಕೊಳ್ಳಬಾರದು ಎಂದು ಗೋವಾದ ಬಿಜೆಪಿ ಶಾಸಕಿ ಅಲೀನಾ ಸಲ್ದಾನಾ ಹೇಳಿದ್ದಾರೆ.

ಮಹಿಳೆಯರು ರಾತ್ರಿ ವೇಳೆ ಮನೆಯಲ್ಲಿರದಿದ್ದರೆ ಮಕ್ಕಳಿಗೆ ಸಮಸ್ಯೆಯಾಗುತ್ತದೆ. ಪುರುಷರಿಗೆ ಹೋಲಿಸಿದರೆ ಮಹಿಳೆಯರು ಸ್ತ್ರೀಸಹಜ ಕೋಮಲತೆ ಹೊಂದಿದವರು. ಆದ್ದರಿಂದ ಅವರನ್ನು ರಾತ್ರಿ ಪಾಳಿಯಲ್ಲಿ ದುಡಿಸಬಾರದು ಎಂದು ವಿಧಾನಸಭೆಯ ಹೊರಭಾಗದಲ್ಲಿ ಸುದ್ದಿಗಾರರ ಜೊತೆ ಮಾತನಾಡುತ್ತಿದ್ದ ಶಾಸಕಿ ಹೇಳಿದರು.

ಗುರುವಾರ ವಿಧಾನಸಭೆಯಲ್ಲಿ ಮಾತನಾಡಿದ್ದ ಗೋವಾ ಮುಖ್ಯಮಂತ್ರಿ ಚರ್ಚಿಲ್ ಅಲೆಮೊ, ಗೋವಾದ ಮಹಿಳೆಯರು ಕೋಮಲೆಯರಾಗಿದ್ದು ಅವರು ರಾತ್ರಿ ಪಾಳಿಯಲ್ಲಿ ಕೆಲಸ ಮಾಡಬಾರದು. ಗೋವಾ ರಾಜ್ಯದವರಲ್ಲದ ಮಹಿಳೆಯರು ‘ತುಂಬಾ ಜೋರಿನವರು’ ಎಂದು ಹೇಳಿದ್ದರು. ಈ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು.

ಫ್ಯಾಕ್ಟರಿ ಹಾಗೂ ಉತ್ಪಾದನಾ ಘಟಕದಲ್ಲಿ ಮಹಿಳೆಯರಿಗೆ ರಾತ್ರಿ ಪಾಳಿ ಕೆಲಸಕ್ಕೆ ಅನುವು ಮಾಡಿಕೊಡುವ ‘ಫ್ಯಾಕ್ಟರೀಸ್ (ಗೋವಾ ತಿದ್ದುಪಡಿ) ಕಾಯ್ದೆ 2019 ಗುರುವಾರ ಗೋವಾ ವಿಧಾನಸಭೆಯಲ್ಲಿ 26-5 ಮತಗಳ ಅಂತರದಿಂದ ಅಂಗೀಕಾರವಾಗಿತ್ತು.

 ವಿಧಾನಸಭೆಯಲ್ಲಿ ತಮ್ಮ ಅಸಮಾಧಾನವನ್ನು ಯಾಕೆ ವ್ಯಕ್ತಪಡಿಸಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಶಾಸಕಿ ಸಲ್ದಾನಾ, ನಾನು ಆಕ್ಷೇಪಿಸಿಲ್ಲ ಎಂದು ಹೇಳುವುದು ಸರಿಯಲ್ಲ. ಇನ್ನೊಂದು ವಿಷಯದ ಬಗ್ಗೆ ಕೆಲವು ಅಂಶಗಳನ್ನು ಸಂಗ್ರಹಿಸಿ ಬರೆದಿಟ್ಟುಕೊಳ್ಳುವುದರಲ್ಲಿ ಮಗ್ನವಾಗಿದ್ದರಿಂದ ಆಕ್ಷೇಪ ಎತ್ತಲು ಅವಕಾಶ ಸಿಗಲಿಲ್ಲ. ಅದೊಂದು ಅಲ್ಪಾವಧಿಯ ಚರ್ಚೆಯಾಗಿದ್ದರಿಂದ ನನಗೆ ಭಾಗವಹಿಸಲು ಆಗಲಿಲ್ಲ. ಈ ಬಗ್ಗೆ ವಿಷಾಧವಿದೆ ಎಂದರು.

ಮಕ್ಕಳು ಮನೆಯಿಂದ ಶಾಲೆಗೆ ತೆರಳುವಾಗ ಹಾಗೂ ರಾತ್ರಿ ವೇಳೆ ಮನೆಯಲ್ಲಿ ಮಹಿಳೆಯರು ಇರಬೇಕು. ಅವರು ತಾಯಂದಿರು. ಅವರಿಗೆ ಬಹಳಷ್ಟು ಜವಾಬ್ದಾರಿಗಳಿರುತ್ತವೆ. ಮನೆಯಲ್ಲಿ ತಾಯಿ ಇರದಿದ್ದರೆ ಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಬಹುದು. ಮಹಿಳೆಯರು ರಾತ್ರಿ ಪಾಳಿಯಲ್ಲಿ ದುಡಿಯಬಾರದು ಎಂಬುದು ನನ್ನ ಅಭಿಪ್ರಾಯವಾಗಿದೆ. ಮಸೂದೆಯಲಿರುವ ನ್ಯೂನತೆಯ ಬಗ್ಗೆ ಗಮನ ಹರಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ಶಾಸಕಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News