×
Ad

ಜ್ಞಾನದ ಕೊರತೆಯಿಂದ ಜಾತಿ ವ್ಯವಸ್ಥೆ ಜೀವಂತ: ಸಾಣೇಹಳ್ಳಿ ಸ್ವಾಮೀಜಿ

Update: 2019-08-02 21:31 IST

ಉಡುಪಿ, ಆ.2: 'ಮತ್ತೆ ಕಲ್ಯಾಣ' ನಿರಂತರವಾಗಿ ನಡೆಯದ ಪರಿಣಾಮ ಜಾತಿ ತಾರತಮ್ಯ ಇಂದು ಕೂಡ ಜೀವಂತವಾಗಿದೆ. 12ನೇ ಶತಮಾನದಲ್ಲಿದ್ದ ಜ್ಞಾನ ಈಗ ಇಲ್ಲ. ಈಗ ಇರುವುದು ಕೇವಲ ಬುದ್ದಿ ಮಾತ್ರ. ಜ್ಞಾನ ವಿವೇಕದ ಕಡೆಗೆ ನಮ್ಮನ್ನು ಕರೆದುಕೊಂಡು ಹೋಗುತ್ತದೆ. ಆ ಜ್ಞಾನ ಇದ್ದಿದ್ದರೆ ಇಂದು ಜಾತಿ ವ್ಯವಸ್ಥೆ ಇಲ್ಲವಾಗಿರುತ್ತಿತ್ತು ಎಂದು ಹೊಸದುರ್ಗ ತಾಲೂಕು ಸಾಣೇಹಳ್ಳಿ ಮಠದ ಶ್ರೀಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಸಾಣೇಹಳ್ಳಿಯ ಶ್ರೀತರಳಬಾಳು ಜಗದ್ಗುರು ಶಾಖಾ ಮಠದ ಸಹಮತ ವೇದಿಕೆಯ ವತಿಯಿಂದ ಉಡುಪಿ ಬಸವ ಸಮಿತಿಯ ಸಹ ಯೋಗದೊಂದಿಗೆ ಮತ್ತೆ ಕಲ್ಯಾಣ ಕಾರ್ಯಕ್ರಮದ ಪ್ರಯುಕ್ತ ಶುಕ್ರವಾರ ಉಡುಪಿಯ ಪುರಭವನದಲ್ಲಿ ನಡೆದ ವಿದ್ಯಾರ್ಥಿಗಳ ಜೊತೆ ಸಂವಾದದಲ್ಲಿ ಅವರು ಮಾತನಾಡುತಿದ್ದರು.

ಮೌಢ್ಯ ಬಹಳ ವಿಸ್ತಾರವಾಗಿ ಹರಡಿಕೊಂಡಿದೆ. ದೃಶ್ಯ ಮಾಧ್ಯಮಗಳು ವೌಢ್ಯ ಹರಡುವಲ್ಲಿ ಸ್ಪರ್ಧೆಯನ್ನು ನಡೆಸುತ್ತಿವೆ.ಬುದ್ಧಿವಂತಿಕೆ ಬೆಳೆಸಿಕೊಂಡರೆ ಯಾವುದೇ ವೌಢ್ಯಕ್ಕೂ ಬಲಿಯಾಗಲು ಸಾಧ್ಯವಿಲ್ಲ. ನಮ್ಮಲ್ಲ್ಲಿರುವ ತಪ್ಪು ಕಲ್ಪನೆಯನ್ನು ದೂರ ಮಾಡುವುದೇ ಮತ್ತೆ ಕಲ್ಯಾಣದ ಉದ್ದೇಶವಾಗಿದೆ ಎಂದರು.

ಬೆಳಕು, ಗಾಳಿ, ನೆಲಕ್ಕೆ ಜಾತಿ ಇಲ್ಲ. ಮತ್ತೆ ಇಂತಹ ಜಾತಿ ಮನುಷ್ಯರಲ್ಲಿ ಯಾಕೆ ಬಂತು. ನಮ್ಮ ಅರಿವು-ಆಚಾರ ಒಂದಾದರೆ ಜಾತಿ ಎಂಬ ಭೂತ ನಮ್ಮಿಂದ ದೂರ ಹೋಗುತ್ತದೆ. ಹುಟ್ಟನ ಕಾರಣಕ್ಕಾಗಿ ಜಾತಿ ಅಸ್ಪಶ್ಯತೆ ಆಚರಣೆ ಸಲ್ಲದು. ಗುಡಿ, ಮರ ಸುತ್ತುವುದು, ನೀರಿನಲ್ಲಿ ಮುಳುಗುವುದು ಇವೆಲ್ಲವೂ ಪುರೋಹಿತರು ಹೇಳುವ ವೌಢ್ಯಗಳಾಗಿವೆ ಎಂದು ಅವರು ಟೀಕಿಸಿದರು.

ಮೀಸಲಾತಿ ಕುರಿತ ವಿದ್ಯಾರ್ಥಿ ಪ್ರಶ್ನೆಗೆ ಉತ್ತರಿಸಿದ ಮಾಜಿ ಶಾಸಕ ಹಾಗೂ ಚಿಂತಕ ವೈ.ಎಸ್.ವಿ.ದತ್ತ, ಬಸವಣ್ಣ ಮೀಸಲಾತಿಯನ್ನು ಸಾಮಾಜಿಕ ನ್ಯಾಯದ ಮೂಲಕ ಪ್ರತಿಪಾದಿಸಿದ್ದರು. ಇಂದಿಗೂ ಸಮಾಜದಲ್ಲಿ ಮೇಲುಕೀಳು ಎಂಬ ಅಸಮಾನತೆ ಇದೆ. ಶೋಷಿತ ಜನಾಂಗ ಮತ್ತು ಮೇಲ್ಜಾತಿ ನಡುವೆ ಸಮಾನತೆ ಮೂಡುವವರೆಗೆ ಮೀಸಲಾತಿ ಅತಿ ಅಗತ್ಯ. ನಮ್ಮಲ್ಲಿ ಸಮಾನತೆ ಮೂಡಿದಾಗ ಮಾತ್ರ ಮೀಸಲಾತಿಯನ್ನು ನಿಲ್ಲಿಸಬಹುದಾಗಿದೆ ಎಂದು ಹೇಳಿದರು.

ಕಾಂತಾವರ ಅಲ್ಲಮಪ್ರಭು ಪೀಠದ ನಿರ್ದೇಶಕ ಡಾ.ನಾ.ಮೊಗಸಾಲೆ ಮಾತನಾಡಿ, ಶರಣರು ಪ್ರತಿಪಾದಿಸಿರುವುದು ವಚನ ಧರ್ಮವೇ ಹೊರತು ಸಾಹಿತ್ಯ ಅಲ್ಲ. ಇದು ನಮ್ಮ ಬದುಕಿಗೆ ಬೇಕಾದ ನಿಜವಾದ ಧರ್ಮ. ಮನಸಾಕ್ಷಿ ಗಿಂತ ದೊಡ್ಡ ದೇವರಿಲ್ಲ. ದೇವರಿಗಿಂತ ದೊಡ್ಡದು ಕಾಯಕ. ಇಡೀ ಜಗತ್ತಿನಲ್ಲಿ ವಚನ, ಮಾತಿಗೆ ಹುಟ್ಟಿದ ಏಕೈಕ ಧರ್ಮ ವಚನ ಧರ್ಮ ಆಗಿದೆ. ಇದು ಸಾಂಸ್ಕೃತಿಕ ಧರ್ಮವೇ ಹೊರತು ಸಾಂಸ್ಥಿಕ ಧರ್ಮ ಅಲ್ಲ ಎಂದು ಹೇಳಿದರು.

ಸಂವಾದದಲ್ಲಿ ಜಿಲ್ಲೆಯ ವಿವಿಧ ಕಾಲೇಜುಗಳ ಆಯ್ದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಉಡುಪಿ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರಾಧ್ಯಾಪಕ ನಾಗರಾಜ ಜೆ.ಎಂ. ಉಪಸ್ಥಿತರಿದ್ದರು.

‘20 ವರ್ಷಗಳಿಂದ ದೇವಸ್ಥಾನಕ್ಕೆ ಹೋಗುತ್ತಿಲ್ಲ’

ಇಂದು ದೇವರುಗಳ ಕಾಟ ಜಾಸ್ತಿಯಾಗಿದೆ. ದೇವಸ್ಥಾನಕ್ಕೆ ಹಣ ಕೊಡದಿದ್ದರೆ ಜನ ನಮಗೆ ಮತ ಹಾಕದೆ ಸೋಲಿಸುತ್ತಾರೆ. ಹೀಗಾಗಿ ಸ್ವಾಮೀಜಿ, ದೇವಸ್ಥಾನ ಗಳ ಸುದ್ದಿಗೆ ಹೋಗಬಾರದು ಎಂದು ವೈ.ಎಸ್.ವಿ.ದತ್ತ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸ್ವಾಮೀಜಿ ನಾನು ಕಳೆದ 20ವರ್ಷಗಳಿಂದ ಯಾವುದೇ ದೇವಸ್ಥಾನಗಳ ಶಂಕುಸ್ಥಾಪನೆ, ಉದ್ಘಾಟನೆಗಳಿಗೆ ಹೋಗುತ್ತಿಲ್ಲ. ಮುಂದೆ ಕೂಡ ಹೋಗಲ್ಲ. ಸ್ಥಾವರದ ವಿಗ್ರಹದಲ್ಲಿ ಯಾವುದೇ ಶಕ್ತಿ ಇಲ್ಲ ಎಂದು ಹೇಳಿದರು.

ದೇವರ ಹೆಸರಿನಲ್ಲಿ ಪುರೋಹಿತರು ನಮ್ಮನ್ನು ದಾರಿ ತಪ್ಪಿಸುತ್ತಿದ್ದಾರೆ. ಅಂತಹ ದೇವರ ಸುದ್ದಿಗೆ ಯಾರು ಹೋಗಬೇಡಿ. ಪುರೋಹಿತರು ದೇವರ ವರ ಮತ್ತು ಶಾಪ ಎಂಬ ಪಾಪವನ್ನು ನಮ್ಮ ತಲೆಗೆ ತುಂಬಿಸಿದ್ದಾರೆ. ಅಂತಹ ದೇವರನ್ನು ಯಾರು ಕೂಡ ನಂಬಬಾರದು ಎಂದು ಸ್ವಾಮೀಜಿ ವಿದ್ಯಾರ್ಥಿನಿಯ ಪ್ರಶ್ನೆಗೆ ಉತ್ತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News